Ad imageAd image

ಮಾರ್ಗದರ್ಶನ ‌ಮಾಡುವ ಗುರು ಇದ್ದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ : ಎನ್.ಆರ್.ಜಯರಾಮ್

Bharath Vaibhav
ಮಾರ್ಗದರ್ಶನ ‌ಮಾಡುವ ಗುರು ಇದ್ದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ : ಎನ್.ಆರ್.ಜಯರಾಮ್
WhatsApp Group Join Now
Telegram Group Join Now

ತುರುವೇಕೆರೆ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರಷ್ಟೇ ಗುರುಗಳ ಪಾತ್ರ ಮಹತ್ವದ್ದಾಗಿದೆ. ಮುಂದೆ ಗುರಿ, ಹಿಂದೆ ಮಾರ್ಗದರ್ಶನ ‌ಮಾಡುವ ಗುರು ಇದ್ದಲ್ಲಿ ಮನುಷ್ಯ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕದ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಮಾಯಸಂದ್ರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕ ಆಯೋಜಿಸಿದ್ದ ಸಾಹಿತ್ಯ ಸೌರಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಏನೆಲ್ಲಾ ತ್ಯಾಗವನ್ನು ಮಾಡುತ್ತಾರೆ. ಮಕ್ಕಳೂ ಸಹ ಪೋಷಕರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮವಾಗಿ ಅಧ್ಯಯನ ಮಾಡಿ ಸಾಧಕರ ಸಾಲಿನಲ್ಲಿ ನಿಂತಾಗ ಪೋಷಕರ ಶ್ರಮ ಸಾರ್ಥಕವಾಗುತ್ತದೆ. ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರೋತ್ಸಾಹ, ಉತ್ತೇಜನ ನೀಡಿದಲ್ಲಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧಿಸುವ ಹುಮ್ಮಸ್ಸು, ಚೈತನ್ಯ ಬರುತ್ತದೆ ಎಂದರು.

ದಾಸ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಕೆ.ಚಂದ್ರಶೇಖರ್, ಸಾಂಸ್ಕೃತಿಕ, ಸಾಹಿತ್ಯಿಕ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ದಾಸ ಸಾಹಿತ್ಯದ ಕೊಡುಗೆ ಅಪಾರವಾದುದು ಮತ್ತು ಸಂಗೀತದ ಮೂಲಕ ದೈವ ಭಕ್ತಿಯನ್ನು ಮೊಳಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ದಾಸ ಸಾಹಿತ್ಯವನ್ನು ರಚಿಸಿದವರನ್ನು ಹರಿದಾಸರು ಎಂದು ಕರೆಯುತ್ತಾರೆ. ದಾಸ ಪರಂಪರೆಯಲ್ಲಿ ಪುರಂದರದಾಸರು, ಕನಕದಾಸರು ದಾಸಶ್ರೇಷ್ಠರಾಗಿ ದೇವರನಾಮ, ಕೀರ್ತನೆಗಳ ಮೂಲಕ ಸಾಹಿತ್ಯ ಲೋಕವನ್ನು ಬೆಳಗಿದ್ದಲ್ಲದೆ ಭಕ್ತಿಯ ಸರ್ವಶ್ರೇಷ್ಠತೆಯನ್ನು ಸಾರಿರುವುದಲ್ಲದೆ ಪ್ರತಿಯೊಂದು ಕೀರ್ತನೆಯಲ್ಲೂ ಸಾಮಾಜಿಕ ಬದುಕಿನ ಸಾರವನ್ನು ಅರ್ಥೈಸಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು ಮಾತನಾಡಿ, ಕಸಾಪ ಘಟಕವು ಹೋಬಳಿಯಲ್ಲಿ ಪ್ರಾರಂಭವಾದ ದಿನದಿಂದ ಸಂಸ್ಥಾಪಕ ಎನ್.ಆರ್.ಜಯರಾಮ್ ಅವರ ನೇತೃತ್ವದಲ್ಲಿ ಮನೆಮನೆ ಸಾಹಿತ್ಯ ಕಾರ್ಯಕ್ರಮ, ಹಳ್ಳಿಗಳಲ್ಲಿ ಅಡಗಿರುವ ಜಾನಪದ ಕಲಾವಿದರು, ಸಾಹಿತ್ಯ ಪ್ರತಿಭೆಗಳಿಗೆ ಪ್ರೋತ್ಸಾಹ, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಹತ್ತಾರು ರೀತಿಯ ಸಾಹಿತ್ಯಿಕ ಚಟುವಟಿಕೆಯನ್ನು ನಡೆಸುತ್ತಾ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು, ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ, ಕನ್ನಡ ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಹೋಬಳಿ ಮಟ್ಟದಲ್ಲಿ ಕನ್ನಡ ಭವನವನ್ನು ಕಟ್ಟಿದ ಹೆಗ್ಗಳಿಕೆಗೆ ನಮ್ಮ ಮಾಯಸಂದ್ರ ಘಟಕ ಪಾತ್ರವಾಗಿದೆ ಎಂದರು.

ಸಮಾರಂಭದಲ್ಲಿ 2024-25 ನೇ ಸಾಲಿನಲ್ಲಿ ಮಾಯಸಂದ್ರ ಹೋಬಳಿಯ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಕಸಾಪ ಹೋಬಳಿ ಘಟಕದ ಮಾಜಿ ಗೌರವಾಧ್ಯಕ್ಷ ಸಿ.ಎನ್. ನಂಜುಂಡಪ್ಪ, ಮಾಜಿ ಅಧ್ಯಕ್ಷರಾದ ಜವರೇಗೌಡ, ಹನುಮಂತಯ್ಯ, ಶ್ರೀಧರ್, ಮಾಜಿ ಕಾರ್ಯದರ್ಶಿ ಸಿ.ಪಿ.ಪ್ರಕಾಶ್, ಕಸಾಪ ಕಾರ್ಯದರ್ಶಿ ದಿನೇಶ್, ನಗರ ಘಟಕ ಕಾರ್ಯದರ್ಶಿ ಗಿರೀಶ್ ಕೆ ಭಟ್, ನಿವೃತ್ತ ಶಿಕ್ಷಕರಾದ ಶಿವರಾಮ್, ಪುಟ್ಟೇಗೌಡರು, ದೈಹಿಕ ಶಿಕ್ಷಕ ಗಿರಿಧರ್, ಮಹಿಳಾ ಘಟಕದ ಅಧ್ಯಕ್ಷೆ ಆನಂದ ಮದನ್ ಕುಮಾರ್, ಮಾಜಿ ಅಧ್ಯಕ್ಷೆ ಲೀಲಾವತಿ ಗಿಡ್ಡಯ್ಯ, ಲಲಿತಾಭಟ್, ರಾಧಾಕೃಷ್ಣ, ಯತಿರಾಜ್ ಸೇರಿದಂತೆ ಹಲವು ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
Share This Article
error: Content is protected !!