ತುರುವೇಕೆರೆ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು, ಸಾಮಾಜಿಕ ವ್ಯವಸ್ಥೆಯ ಅರಿವು ಮೂಡಿಸಲು ಹಾಗೂ ವ್ಯಕ್ತಿತ್ವ ವಿಕಸನಗೊಳ್ಳಲು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಸಹಕಾರಿಯಾಗಲಿದೆ ಎಂದು ಮುತ್ತುಗದಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷೆ, ಹಾಲಿ ಸದಸ್ಯೆ ಉಮಾಶಂಕರ್ ತಿಳಿಸಿದರು.
ತಾಲೂಕಿನ ಮುತ್ತುಗದಹಳ್ಳಿ ಗ್ರಾಮದಲ್ಲಿ ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಶಿಕ್ಷಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನದ ಜೊತೆಗೆ ಸಾಮಾಜಿಕ ಪ್ರಜ್ಞೆ, ದೇಶಪ್ರೇಮ, ಸೇವಾ ಮನೋಭಾವ ಬೆಳೆಸಿಕೊಂಡರೆ ಮುಂದೆ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಸಮಾಜದಲ್ಲಿ ಆದರ್ಶನೀಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಈರಯ್ಯ ಮಾತನಾಡಿ, ಸ್ವಚ್ಛತೆ ಹಾಗೂ ಗ್ರಾಮೀಣಾಭಿವೃದ್ದಿಯಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ಯುವಸಮೂಹ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ, ಅಲ್ಲಿನ ವ್ಯವಸ್ಥೆ, ಜೀವನಕ್ರಮದ ಬಗ್ಗೆ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ. ಇದಲ್ಲದೆ ಗ್ರಾಮೀಣ ಜನರಲ್ಲಿ ಸ್ವಚ್ಛತೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಪಿಡುಗು, ಮೂಢನಂಬಿಕೆ, ಕೃಷಿ, ಹೈನುಗಾರಿಕೆ, ಕಾನೂನು, ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ, ಸಾಂಕ್ರಾಮಿಕ ರೋಗಗಳು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಯೋಜನೆಯ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರನ್ನೂ ಗೌರವಿಸಲಾಯಿತು. ಗುಡಿಗೌಡ ರವಿಕುಮಾರ್, ಪ್ರದೀಪ್, ಭೈರಪ್ಪರಾಜ್, ಜಯಕುಮಾರ್, ಉಪನ್ಯಾಸಕ ವಿಜಯಕುಮಾರ್, ಶಿಬಿರಾಧಿಕಾರಿಗಳಾದ ಡಾ.ರಾಘವೇಂದ್ರ, ಪ್ರೊ.ಮನೋಹರ್ ಕೆ.ಎಸ್., ಪ್ರೊ.ರಾಘವೇಂದ್ರ ಕೆ., ಮುಖಂಡರಾದ ಕೆಂಪೇಗೌಡ, ಶೋಭಾಬಸವರಾಜ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




