ಇವತ್ತು 2025ರ ಅಕ್ಟೋಬರ್ 6 ರಂದು ಭಾರತದ ಇತಿಹಾಸದಲ್ಲಿಯೂ, ವಿಶೇಷವಾಗಿ ಭಾರತದ ನ್ಯಾಯಾಂಗದ ಇತಿಹಾಸದಲ್ಲಿಯೂ, ಒಂದು ಕರಾಳ ದಿನ, ಕಪ್ಪು ದಿನ (Black Day) ಎಂದು ನಾವು ಸ್ಪಷ್ಟವಾಗಿ ಬರೆದಿಡಬಹುದು.
ಯಾಕೆಂದರೆ ಇಂದಿನ ದಿನ ಮೊಟ್ಟ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಾದ (Chief Justice of India) ಬಿ.ಆರ್. ಗವಾಯಿ ಅವರ ಮೇಲೆ ಚಪ್ಪಲಿ ಎಸೆಯುವಂತಹ ಹೀನ ಕೃತ್ಯದ ಪ್ರಯತ್ನ ನಡೆಯಿತು.
ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ ಇದು ಭಾರತದ ಸಂವಿಧಾನದ ಮೇಲಿನ ನೇರ ಹಲ್ಲೆ, ನ್ಯಾಯಾಂಗದ ಗೌರವದ ಮೇಲಿನ ದಾಳಿ.
ಇಡೀ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಧರ್ಮಾಂಧತೆ, ಕೋಮುವಾದ, ದ್ವೇಷ ಮತ್ತು ಜಾತಿವಾದದ ಪರಿಣಾಮವಾಗಿ, ಜನರಿಗೆ ತಮಗೆ ಬೇಕಾದದ್ದು ಮಾಡಬಹುದು ಎಂಬ ಧೈರ್ಯ ಬಂದಿದೆ.
“ಹಿಂದುತ್ವದ ಹೆಸರಿನಲ್ಲಿ ನಾವು ಏನಾದರೂ ಮಾಡಬಹುದು, ನಮ್ಮ ಹಿಂದಿದೆ ಮೋದಿ ಸರ್ಕಾರ, ಯೋಗಿ ಆದಿತ್ಯನಾಥ್ ಇದ್ದಾರೆ, ಸಂವಿಧಾನವನ್ನೂ, ನ್ಯಾಯ ವ್ಯವಸ್ಥೆಯನ್ನೂ ಕೆರೆ ಮಾಡಬಹುದು” ಎಂಬ ಮನೋಭಾವದಿಂದ ಕೆಲವರು ದೇಶದಲ್ಲಿ ಅಶಾಂತಿಯ ಬೀಜ ಬಿತ್ತುತ್ತಿದ್ದಾರೆ.
ಇಂದು ಈ ಕೃತ್ಯ ಮಾಡಿದವನು ರಾಕೇಶ್ ಕಿಶೋರ್ ಎಂಬ ವ್ಯಕ್ತಿ. ಅವನ ನಡೆ, ಅವನ ಮಾತು ಮತ್ತು ಕ್ರಿಯೆಗಳು ಆತನ ಹಿಂದುತ್ವವಾದಿ ಮತ್ತು ಉಗ್ರ ಮನೋಭಾವದ ಪ್ರತೀಕ. ಅವನನ್ನು ಭದ್ರತಾ ಸಿಬ್ಬಂದಿ ತಕ್ಷಣ ಬಂಧಿಸಿದರೂ, “ಸನಾತನಕ್ಕೆ ಅವಮಾನವನ್ನು ನಾವು ಸಹಿಸುವುದಿಲ್ಲ” ಎಂದು ಕೂಗುತ್ತಾ ಅವನು ಹೊರಟಿದ್ದಾನೆ.
ಇದರಿಂದಲೇ ಸ್ಪಷ್ಟವಾಗುತ್ತದೆ – ಇದು ಏಕಾಏಕಿ ನಡೆದ ಘಟನೆ ಅಲ್ಲ, ವ್ಯವಸ್ಥಿತವಾಗಿ ರೂಪಿತವಾದ ಷಡ್ಯಂತ್ರ. ರಾಕೇಶ್ ಕಿಶೋರ್ ಎಂಬಾತ 70 ವರ್ಷಕ್ಕಿಂತ ಮೇಲ್ಪಟ್ಟವನು.
ಅವನು 11 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ವಕೀಲನಾಗಿ ನೋಂದಾಯಿಸಿಕೊಂಡಿದ್ದಾನೆ.
ಹೀಗಿರುವಾಗ, ಇದು ಕೇವಲ “ಬಿಸಿ ರಕ್ತದ ಕೆಲಸ” ಅಲ್ಲ — ಇದು ಯೋಚಿಸಿಕೊಂಡು ಮಾಡಿದ ಕ್ರಮಿತ ಹಲ್ಲೆ.
ಇವನ ಮನಸ್ಥಿತಿ ಎಷ್ಟರ ಮಟ್ಟಿಗೆ ಮನುವಾದಿ ಮತ್ತು ಸಂವಿಧಾನ ವಿರೋಧಿ ಎಂಬುದು ಈ ಘಟನೆಯಿಂದಲೇ ಗೊತ್ತಾಗುತ್ತದೆ.
ಘಟನೆ ಬಳಿಕ ಸಿ.ಜಿ.ಐ. ಬಿ.ಆರ್. ಗವಾಯಿ ಅವರು ಅತ್ಯಂತ ಶಾಂತವಾಗಿ ಪ್ರತಿಕ್ರಿಯಿಸಿ, “ನಾನು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ, ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತೇನೆ” ಎಂದಿದ್ದಾರೆ.
ಅವರ ಈ ಮಾತು ಸಂವಿಧಾನ ನಿಷ್ಠೆಯ ಅತ್ಯುನ್ನತ ಉದಾಹರಣೆ.
ಆದರೆ ಪ್ರಶ್ನೆ ಉದ್ಭವಿಸುತ್ತದೆ ಈ ದಾಳಿ ಯಾಕೆ? ಯಾರ ಪ್ರೇರಣೆಯಿಂದ?
ಇತ್ತೀಚೆಗಷ್ಟೇ ಆರ್.ಎಸ್.ಎಸ್. ನೂರು ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯುತ್ತಿದೆ.
ಅದರ ಹಿನ್ನೆಲೆಯಲ್ಲೇ ಈ ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
“ನಮ್ಮ ಮೇಲೆ ಯಾರೂ ಏನೂ ಮಾಡಬಾರದು” ಎಂಬ ಅಹಂಕಾರದಿಂದ ಪ್ರೇರಿತವಾಗಿ ಈ ಕೃತ್ಯ ನಡೆದಿರಬಹುದು.
ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ —
ಆದರೆ ಇದೇ ನಾಯಕರು ಕ್ರಿಕೆಟಿಗರೋ, ಸಿನಿತಾರೆಯರೋ ಸಣ್ಣ ಘಟನೆಗೆ ಟ್ವೀಟ್ ಮಾಡುವವರು.
ಈ ಮೌನವೇ ಬಹಳ ಅರ್ಥಪೂರ್ಣ.
ಅದರ ಅರ್ಥ — ಇಂತಹ ಘಟನೆಗಳಿಗೆ ಅವರ ಪ್ರೇರಣೆ ಅಥವಾ ಮೌನಾನುಮೋದನೆ ಇದೆ ಎಂಬ ಸಂದೇಶ ನೀಡುತ್ತದೆ.
ಇದಕ್ಕೂ ಮುಂಚೆ ಎರಡು ಪ್ರಮುಖ ಘಟನೆಗಳು ನಡೆದಿದ್ದುವು:
1.ಕೆಲವೇ ದಿನಗಳ ಹಿಂದೆ ಗವಾಯಿ ಅವರ ಮುಂದೆ ಒಂದು ವಕೀಲ ಅರ್ಜಿ ಸಲ್ಲಿಸಿದ್ದನು – ಒಂದು ಹಳೆಯ ವಿಷ್ಣು ವಿಗ್ರಹದ ಪುನಃ ಸ್ಥಾಪನೆಗೆ ಅನುಮತಿ ನೀಡಬೇಕೆಂದು.
ಆದರೆ ಆ ಸ್ಥಳವು ಯುನೆಸ್ಕೋ ಸಂರಕ್ಷಿತ ಪ್ರದೇಶವಾಗಿದ್ದು, ಅಲ್ಲಿ ಯಾವುದೇ ವಿಗ್ರಹ ಬದಲಾವಣೆ ಸಾಧ್ಯವಿಲ್ಲವೆಂದು ಗವಾಯಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಆದಾಗ ವಕೀಲ ತೀವ್ರ ಧರ್ಮಾಂಧ ಮನೋಭಾವದಿಂದ, “ನನ್ನ ಮತ್ತು ನನ್ನ ದೇವರ ಮಧ್ಯೆ ಬಾರದಿರಿ” ಎಂದನು.
ಅದಕ್ಕೆ ಗವಾಯಿ ಅವರು, “ಇದು ದೇವರ ವಿಚಾರ ಅಲ್ಲ, ಕಾನೂನಿನ ವಿಚಾರ. ದೇವರ ವಿಷಯ ಬೇಕಾದರೆ ದೇವರ ಹತ್ತಿರ ಹೋಗಿ, ಇಲ್ಲಿಗೆ ಬಾರದಿರಿ” ಎಂದರು.
ಈ ಮಾತಿನ ಬಳಿಕ ಅವರನ್ನು ಧರ್ಮವಿರೋಧಿ ಎಂದು ಕರೆದ ಅಭಿಯಾನ ಆರಂಭವಾಯಿತು.
2.ಇನ್ನೊಂದು ವಿಚಾರ – ಆರ್.ಎಸ್.ಎಸ್. ನೂರು ವರ್ಷಗಳ ಸಂಭ್ರಮಾಚರಣೆಗೆ ಗವಾಯಿ ಅವರ ತಾಯಿ ಶ್ರೀಮತಿ ಕಮಲಾತಾಯಿ ಗವಾಯಿ ಅವರನ್ನು ಅಧ್ಯಕ್ಷೆಯಾಗಿ ಆಹ್ವಾನಿಸಲಾಯಿತು. ಆದರೆ ಅವರು ಕಟ್ಟಾ ಅಂಬೇಡ್ಕರ್‌ವಾದಿ, ಡಾ. ಬಾಬಾಸಾಹೇಬರ ಸಹಧರ್ಮಯಾತ್ರೆಯವರಾಗಿದ್ದು, ತಮ್ಮ ಗಂಡನೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದವರು.
ಹೀಗಾಗಿ ಅವರು ಸ್ಪಷ್ಟವಾಗಿ ಪತ್ರ ಬರೆದು, “ನಾನು ಕಟ್ಟಾ ಅಂಬೇಡ್ಕರ್‌ವಾದಿ. ಯಾವುದೇ ಕಾರಣಕ್ಕೂ ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಆದರೂ ಕೂಡ ಆರ್.ಎಸ್.ಎಸ್. ನಾಯಕರು ಒತ್ತಡ ಹೇರಿದರು, ಅವರ ಪುತ್ರ ರಾಜೇಂದ್ರ ಗವಾಯಿ ಮೂಲಕ ಮನವೊಲಿಸಲು ಪ್ರಯತ್ನಿಸಿದರು.
ಆದರೂ ಕಮಲಾತಾಯಿ ತಮ್ಮ ನಿಲುವು ಬದಲಿಸಲಿಲ್ಲ.
ಈ ಕಾರಣದಿಂದಲೇ ಗವಾಯಿ ಕುಟುಂಬದ ಮೇಲಿನ ಅಸಮಾಧಾನ, ಆಕ್ರೋಶ, ಮತ್ತು ಸಿಟ್ಟು ಆರ್.ಎಸ್.ಎಸ್. ವಲಯದಲ್ಲಿ ಉಂಟಾಗಿದೆ ಎನ್ನುವುದು ಸ್ಪಷ್ಟ.
ಹೀಗಾಗಿ ಇಂದಿನ ಘಟನೆ — ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಈ ಹೀನ ಕೃತ್ಯ ಕೇವಲ ವ್ಯಕ್ತಿಗತ ಕೋಪದಿಂದಲ್ಲ, ಬೌದ್ಧ ಸಿ.ಜಿ.ಐ. ಗವಾಯಿ ಅವರ ವಿರುದ್ಧ ನಡೆದ ಸಂಚು, ಡಾ.
ಅಂಬೇಡ್ಕರ್ ವಾದದ ವಿರುದ್ಧದ ಅಸಹಿಷ್ಣು ಪ್ರತೀಕಾರದ ರೂಪ.
ಇದು ಭಾರತದ ನ್ಯಾಯಾಂಗದ ಇತಿಹಾಸದಲ್ಲಿಯೇ ಅತ್ಯಂತ ನಾಚಿಕೆಯಾಗುವ ದಿನ.
ಇವತ್ತು ನಾವು ಎಲ್ಲರೂ ಈ ಘಟನೆಗೆ ವಿರೋಧವಾಗಿ ಧ್ವನಿಸಬೇಕಾಗಿದೆ.
ಸಂವಿಧಾನ, ನ್ಯಾಯ, ಮತ್ತು ಬೌದ್ಧ ಸಿದ್ಧಾಂತಗಳ ಮೇಲಿನ ನಂಬಿಕೆಯನ್ನು ಕಾಪಾಡಬೇಕಾಗಿದೆ.
ಜೈಭೀಮ ಡಿ. ಶಿಂಧೆ
ವಕೀಲರು ಕಲಬುರಗಿ




