ಬೆಳಗಾವಿ: ಬಡವರ ಹಸಿವು ನೀಗಿಸಬೇಕಾದ ಸರ್ಕಾರದ ಪಡಿತರ ಅಕ್ಕಿ ಈಗ ಅಕ್ರಮ ದಂಧೆಕೋರರ ಪಾಲಾಗುತ್ತಿದೆ! ಹಗಲು ರಾತ್ರಿ ಎನ್ನದೆ ಬಡವರ ಅಕ್ಕಿಯನ್ನು ಕಳ್ಳತನದಿಂದ ಸಂಗ್ರಹಿಸಿ, ಕಳ್ಳಸಾಗಣೆ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಬೆಳಗಾವಿಯ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಂಗಂಗಳು ಅಕ್ಷರಶಃ ಬೇಟೆಯಾಡಿದ್ದಾರೆ.
ನಡೆದಿದ್ದೇನು? ಎಲ್ಲಿತ್ತು ಈ ಕಳ್ಳರ ಅಡ್ಡೆ?
ನಗರದ ದೇವಾಂಗ ನಗರದ 4ನೇ ಕ್ರಾಸ್‌ನಲ್ಲಿ ಜನವಸತಿ ನಡುವೆಯೇ ರಾಜಾರೋಷವಾಗಿ ಈ ಅಕ್ರಮ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಬಿ. ದಾಯನ್ನವರ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಶಾನವಾಜ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಕಳ್ಳಸಾಗಣೆಗಾಗಿ ಸಿದ್ಧಪಡಿಸಿಟ್ಟಿದ್ದ ಭಾರಿ ಪ್ರಮಾಣದ ಅಕ್ಕಿ ಪತ್ತೆಯಾಗಿದೆ. ಈ ಇಡೀ ಅಕ್ರಮ ಜಾಲದ ಹಿಂದೆ ಆಸಿಫ್ ಕುತುಬುದ್ದೀನ್ ಕಿಲ್ಲೆದಾರ ಎಂಬ ವ್ಯಕ್ತಿಯ ಕೈವಾಡ ಇರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದ್ದು, ಅಧಿಕಾರಿಗಳ ನಡೆ ಈಗ ದಂಧೆಕೋರರ ನಿದ್ದೆಗೆಡಿಸಿದೆ.

ಖಡಕ್ ದಾಳಿ – ಆಹಾರ ನಿರೀಕ್ಷಕರಾದ ಎಸ್. ಡಿ. ಶಿವಣ್ಣವರ, ಎಸ್. ಬಿ. ಬಾಂಡಗೆ ಹಾಗೂ ಐ. ಐ. ಮಣಿಯಾರ್ ಮತ್ತು ಪೊಲೀಸರ ಜಂಟಿ ಪಡೆ ನಡೆಸಿದ ಈ ‘ಮಿಂಚಿನ ಕಾರ್ಯಾಚರಣೆ’ಯಲ್ಲಿ ಎರಡು ಟನ್ ಒಂದು ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಡವರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದ ಈ ಜಾಲದ ಉಳಿದ ಕಿಲಾಡಿಗಳಿಗಾಗಿ ಈಗ ಬಲೆ ಬೀಸಲಾಗಿದೆ. “ಬಡವರ ಹೊಟ್ಟೆ ಹೊಡೆಯುವವರು ಯಾರೇ ಇರಲಿ, ಅವರನ್ನು ಬಿಡುವುದಿಲ್ಲ” ಎಂಬ ಕಠಿಣ ಸಂದೇಶವನ್ನು ಈ ದಾಳಿಯ ಮೂಲಕ ಸರ್ಕಾರಿ ಯಂತ್ರ ರವಾನಿಸಿದೆ. ಗೋದಾಮು ಮಾಲೀಕರಿಗೂ ಹಾಗೂ ಈ ದಂಧೆಯ ಹಿಂದಿರುವ ಕಾಣದ ಕೈಗಳಿಗೂ ಈಗ ಕಾನೂನಿನ ಬಿಸಿ ಸರಿಯಾಗಿಯೇ ತಟ್ಟಿದೆ.
ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ಈ ಧೈರ್ಯದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂಬ ಒತ್ತಾಯ ಕೇಳಿಬರುತ್ತಿದೆ.
ವರದಿ: ಮಹಾಂತೇಶ ಎಸ್. ಹುಲಿಕಟ್ಟಿ




