ತುರುವೇಕೆರೆ: ತಾಲ್ಲೂಕಿನ ಸುಕ್ಷೇತ್ರ ಮುನೀಶ್ವರನಗರದ ಶ್ರೀ ಮುನೀಶ್ವರ ಗುರುಕುಲ ವಿದ್ಯಾಮಂದಿರ ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಮೇ 20 ರಂದು ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಸಿ.ಎ.ಶಿವಪ್ಪ ತಿಳಿಸಿದರು.
ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಉತ್ತಮ ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವುದು ನಮ್ಮ ಆಶಯವಾಗಿತ್ತು. ಕಳೆದೊಂದು ದಶಕದ ಹಿಂದೆ ಪ್ರಾರಂಭಗೊಂಡ ವಿದ್ಯಾಮಂದಿರ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಬದುಕನ್ನು ರೂಪಿಸಲು ಶ್ರಮಿಸುತ್ತಿದೆ. ಪಟ್ಟಣದ ಪ್ರದೇಶದಲ್ಲಿ ಸಿಗುವಂತಹ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಮ್ಮ ಮಕ್ಕಳೂ ಉತ್ತೀರ್ಣರಾಗಿ ಉನ್ನತ ಹುದ್ದೆಯನ್ನು ಹೊಂದುವಂತಹ ಶಿಕ್ಷಣ ನೀಡಬೇಕೆನ್ನುವ ದೃಷ್ಟಿಯಿಂದ ಸಿಬಿಎಸ್.ಇ ಪಠ್ಯಕ್ರಮದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ಶ್ರೀ ಮುನೀಶ್ವರ ಗುರುಕುಲ ವಿದ್ಯಾಮಂದಿರ ಶಾಲೆಯು ಹತ್ತನೇ ವರ್ಷಕ್ಕೆ ಕಾಲಿಟ್ಟಿದ್ದು, ಶಾಲೆಯ ದಶಮಾನೋತ್ಸವ ಸಮಾರಂಭವನ್ನು ಮೇ 20 ರಂದು ಮಂಗಳವಾರ ಸಂಜೆ ಚಿಮ್ಮನಹಳ್ಳಿ ಮುನೀಶ್ವರನಗರದ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿದ್ಯವನ್ನು ಶ್ರೀ ಶನೈಶ್ವರಸ್ವಾಮಿ ಪುಣ್ಯಕ್ಷೇತ್ರದ ಡಾ.ಶ್ರೀ. ಸಿದ್ದರಾಜುಸ್ವಾಮಿಗಳು ವಹಿಸಲಿದ್ದು, ಆಹಾರ ಮತ್ತು ನಾಗರೀಕ ಪೂರೈಕೆ, ಗ್ರಾಹಕರ ವ್ಯವಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ.ಹರೀಶ್ ಮುನಿಶ್ರೀ ದೀಪ್ತಿರತ್ನ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಸಂಸ್ಥೆಯಿಂದ ಆಧ್ಯಾತ್ಮಿಕ ಚಿಂತಕ ವಿಜಯ್ ಪದ್ಮನಾಭ, ಶ್ರೀ ಶಂಕರ ವಿಲಾಸ ಸಂಸ್ಕೃತ ಪಾಠಶಾಲೆಯ ಪ್ರೊ|| ವಿದ್ವಾನ್ ಶ್ರೀನಿವಾಸಮೂರ್ತಿ, ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಎಂ.ಆರ್.ಜಯರಾಮು, ಜಿಪಂ ಮುಖ್ಯ ಲೆಕ್ಕಾಧಿಕಾರಿ ಕೆ.ಸಿ.ನರಸಿಂಹಮೂರ್ತಿ ಅವರುಗಳಿಗೆ ಮುನಿಶ್ರೀ ದೀಪ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಬೆಮೆಲ್ ಕಾಂತರಾಜು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ.ಬಾಬುರಾವ್ ಮುಡ್ಬಿ, ನಿವೃತ್ತ ಐಆರ್ಎಸ್ ಅಧಿಕಾರಿ ಭೀಮಾಶಂಕರ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಲಿದ್ದಾರೆ. ಇದೇ ದಿನ ರಾತ್ರಿ 9 ಗಂಟೆಗೆ ದಕ್ಷಯಜ್ಞ ಅಥವಾ ಬೃಗುಮುನಿಯ ಗರ್ವಭಂಗ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಚಿದಾನಂದ್, ಬಗರ್ ಹುಕುಂ ಸಮಿತಿ ಸದಸ್ಯ ಗುರುದತ್, ಮುಖಂಡರಾದ ಮಾಯಸಂದ್ರ ಸುಬ್ರಮಣ್ಯ, ರಾಮಕೃಷ್ಣಯ್ಯ, ಚಂದ್ರಣ್ಣ, ಸೋಮೇನಹಳ್ಳಿ ಜಗದೀಶ್, ಶಿವರಾಜ್, ಕೃಷ್ಣಮೂರ್ತಿ, ಬೋರಪ್ಪ, ಡಾ.ಚಂದ್ರಯ್ಯ, ಸುನಿಲ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




