ಬೆಂಗಳೂರು : ಹೋಳಿ ಹಬ್ಬದ ಸಂಭ್ರಮವು ಹುಚ್ಚಾಟಕ್ಕೆ ತಿರುಗಿ ಮೂವರ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ. ಬಿಹಾರ ಮೂಲದ ಅನ್ಸು(22) ರಾಧೆ ಶ್ಯಾಮ್(23) ಹಾಗೂ ದೀಪು ಮೃತ ದುರ್ದೈವಿಗಳಾಗಿದ್ದಾರೆ.
ಬಿಹಾರ ಮೂಲದ 6 ಮಂದಿ ಕೂಲಿ ಕಾರ್ಮಿಕರು ನಿನ್ನೆಯಿಂದ ಹೋಲಿ ಆಚರಣೆಯಲ್ಲಿ ತೊಡಗಿಕೊಂಡಿದ್ದರು.ಬಳಿಕ ಮದ್ಯಸೇವನೆ ಮಾಡಿ ಸರ್ಜಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಫೋರ್ ವಾಲ್ ಕಟ್ಟಡದಲ್ಲಿ ಮಲಗಲೆಂದು ತೆರಳಿದ್ದರು.
ಈ ವೇಳೆ ಅವರವರಲ್ಲೇ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿದ್ದ ಯುವಕರು ಮೂವರನ್ನು ಹತ್ಯೆಗೈದಿದ್ದಾರೆ. ಮೂರನೇ ಮಹಡಿಯಲ್ಲಿ ಒಂದು ಕೋಣೆಯಲ್ಲಿ ಎರಡು ಶವ ಮತ್ತೊಂದು ಕೋಣೆಯಲ್ಲಿ ಒಂದು ಶವ ಪತ್ತೆಯಾಗಿದೆ.
ಕೂಡಲೇ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಓರ್ವ ಅಪರಾಧಿಯನ್ನು ವಶಕ್ಕೆ ಪಡೆದಿದ್ದಾರೆ. ಮಿಕ್ಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪರಾಧಿಗಳ ಜಾಡು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಸಿ.ಕೆ ಬಾಬಾ ಮಾತನಾಡಿ, ಇದೊಂದು 14 ಮಹಡಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿದೆ. ಸಂಜೆಯಷ್ಟೇ ಈ ಬಗ್ಗೆ ನಮಗೆ ಮಾಹಿತಿ ದೊರೆತಿದೆ.ಒಟ್ಟಾರೆ ನಮಗೆ ಮೂರು ಶವಗಳು ದೊರೆತಿದ್ದು, ಇವರೆಲ್ಲರೂ ಪಂಬ್ಲಿಂಗ್ ಮತ್ತಿತರ ಕೆಲಸದಲ್ಲಿದ್ದರೆಂದು ತಿಳಿದುಬಂದಿದೆ. ಹೋಳಿ ಹಬ್ಬದ ಪ್ರಯುಕ್ತ ಮೂರು ದಿನ ರಜೆ ನೀಡಲಾಗಿತ್ತು.
ಈ ವೇಳೆ ಮೂವರೂ ತಮ್ಮ 3-4 ಮಂದಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಆಯೋಜಿಸಿದ್ದರು. ಬಂದಿದ್ದವರ ಪೈಕಿ ಒಬ್ಬಾತ ಗೆಳೆಯನ ಅಕ್ಕನ ಜೊತೆಗೆ ಫೋನಿನಲ್ಲಿ ಮಾತನಾಡಿದ್ದೇ ಜಗಳಕ್ಕೆ ಕಾರಣವಾಗಿದ್ದು , ಮೂವರು ಸ್ಥಳದಲ್ಲಿದ್ದ ರಾಡ್ ಮತ್ತು ಬಾಟಲ್ ಗಳಿಂದ ಹಲ್ಲೆ ನಡೆಸಿದ್ದಾರೆ.
ನಾವು ಬಂದಾಗ ಇಬ್ಬರು ಮೃತಪಟ್ಟಿದ್ದರು. ಒಬ್ಬನನ್ನು ಆಂಬುಲೆನ್ಸ್ ನಲ್ಲಿ ಹಾಕುವಾಗ ಮೃತಪಟ್ಟಿದ್ಧಾನೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಎಲ್ಲರನ್ನೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.