ಬೆಂಗಳೂರು: ಕೋಲ್ಕತ್ತಾ ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು.
ಕರ್ನಾಟಕದಲ್ಲಿಯೂ ಒಪಿಡಿ ಸೇವೆಗಳು ಲಭ್ಯ ಇರುವುದಿಲ್ಲ. ರಾಜ್ಯದ ಎಲ್ಲಾ ಆಸ್ಪತ್ರೆ, ಕ್ಲಿನಿಕ್ ಗಳು ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಬಂದ್ ಆಗಲಿವೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ತುರ್ತು ಸೇವೆ, ಔಷಧ ಅಂಗಡಿ, ಒಳರೋಗಿ ಸೇವೆ, ಹೆರಿಗೆ ಮತ್ತು ತುರ್ತು ಚಿಕಿತ್ಸೆ ಇರಲಿದೆ. ಜ್ವರ, ತಲೆನೋವು, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗೆ ಒಪಿಡಿ ಇರುವುದಿಲ್ಲ. ಡಯಾಲಿಸಿಸ್ ಇರುವುದಿಲ್ಲ, ಕ್ಲಿನಿಕ್ ಸೇವೆ, ಮಕ್ಕಳ ಒಪಿಡಿ, ದಂತ ಚಿಕಿತ್ಸೆ, ತುರ್ತು ಅಲ್ಲದ ಶಸ್ತ್ರಚಿಕಿತ್ಸೆ ಇರುವುದಿಲ್ಲ.
ಪ್ರತಿಭಟನೆಗೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್, ಫನಾ ಬೆಂಬಲಿತ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಮಕ್ಕಳ ವೈದ್ಯರ ಸಂಘ, ಆರ್ಥೋಪೆಡಿಕ್ ಸಂಘ, ಮೆಡಿಕಲ್ ಕಾಲೇಜು ವೈದ್ಯರ ಸಂಘ, ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ.
ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸಲಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ಹೊರರೋಗಿ ಚಿಕಿತ್ಸೆ ದೊರೆಯುವ ಸಾಧ್ಯತೆ ಬಹುತೇಕ ಇರುವುದಿಲ್ಲ.