ಬೆಂಗಳೂರು: ರಾಹುಲ್ ಗಾಂಧಿಯ ಗೆಳೆಯರು ಭಾರತದ ವಿರೋಧಿಗಳು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ವಿದೇಶದಲ್ಲಿ ಕುಳಿತು ಭಾರತದ ಮಾನವನ್ನು ಹರಾಜು ಮಾಡುತ್ತಿದ್ದಾರೆ.
ಹುಟ್ಟಿದ ದೇಶದ ಬಗ್ಗೆ ಏನು ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ಅವರ ಮಾತುಗಳನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಇಂತವರು ಒಂದೊಂದು ದಿನ ದೇಶದ ಸಮಗ್ರತೆ, ಭಾವೈಕ್ಯತೆ, ಸಾಮರಸ್ಯದ ಬಗ್ಗೆ ಮಾತನಾಡಿದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಮೀಸಲಾತಿ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಮೀಸಲಾತಿ ತೆಗೆಯುತ್ತೇವೆ ಎನ್ನುತ್ತಾರೆ. ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿ ನಡೆದುಕೊಂಡ ರೀತಿ ಅಸಹ್ಯ. ಈ ಆಶಾಢಭೂತಿತನ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಕಾಲದಿಂದಲೂ ಕಾಂಗ್ರೆಸ್ ಮೀಸಲಾತಿಯನ್ನು ವಿರೋಧ ಮಾಡಿಕೊಂಡು ಬರುತ್ತಿದೆ. ರಾಜೀವ್ ಗಾಂಧಿ ಮಂಡಲ ಕಮಿಷನ್ಗೆ ವಿರೋಧ ವ್ಯಕ್ತಪಡಿಸಿದ್ದರು. ಓಬಿಸಿ, ಎಸ್ಸಿಎಸ್ಟಿಗಳಿಗೆ ಮೀಸಲಾತಿ ನೀಡಲು ರಾಜೀವ್ ಗಾಂಧಿ ವಿರೋಧ ಮಾಡಿದ್ದರು ಎಂದರು.
ರಾಹುಲ್ ಗಾಂಧಿ ಅಮೆರಿಕದಲ್ಲಿ ಭೇಟಿ ಮಾಡಿದವರನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಇಲ್ಹನ್ ಉಮರ್ ಭಾರತದ ವಿರುದ್ಧ ಇದ್ದಾರೆ. ಅವರನ್ನು ಯಾಕೆ ರಾಹುಲ್ ಗಾಂಧಿ ಭೇಟಿ ಮಾಡಿದರು ಎಂದು ಪ್ರಶ್ನಿಸಿದ್ದಾರೆ.
ಸಿಖ್‌ರ ಮೇಲೆ ನರಮೇಧ ನಡೆಸಿದ್ದು ಕಾಂಗ್ರೆಸ್. ಇಂದಿರಾಗಾಂಧಿಯವರು ಹತ್ಯೆಗೀಡಾದಾಗ ಸೇಡು ತೀರಿಸಿಕೊಳ್ಳಲು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಬರ್ಬರವಾಗಿ ಸಾವಿರಾರು ಜನರನ್ನು ಹತ್ಯೆ ಮಾಡಲಾಯಿತು. ಅಂತಹ ಸಮುದಾಯದ ಬಗ್ಗೆ ರಾಹುಲ್‌ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.