ಬೆಂಗಳೂರು: ರಾಜ್ಯದಲ್ಲಿ ಶೇಕಡ 40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅಂಗವೈಕಲ್ಯ ಪ್ರಮಾಣ ಪತ್ರ ಅಥವಾ ಯುಡಿಐಡಿ ಕಾರ್ಡು ವಿತರಣೆ ನಿರಾಕರಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಇಲಾಖೆಯ ಆಯುಕ್ತ ಡಿ. ರಂದೀಪ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಅಧಿಸೂಚಿತ ವೈದ್ಯಕೀಯ ಅಧಿಕಾರಿಗಳು ಅಂಗವೈಕ್ಯ ಪ್ರಮಾಣ ಪತ್ರ, ಯುಡಿಐಡಿ ಕಾರ್ಡ್ ನೀಡುವಾಗ ಯುಡಿಐಡಿ ಪೋರ್ಟಲ್ ಮೂಲಕವೇ ನೀಡಬೇಕು ಎಂದು ಸೂಚಿಸಿದ್ದಾರೆ.
ಈ ಬಗ್ಗೆ ಮೇ 5ರಂದು ಅಧಿಸೂಚನೆ ಹೊರಡಿಸಲಾಗಿದೆ. 2016ರ RPWD ಕಾಯ್ದೆಯ ಪ್ರಕಾರ ಯುಡಿಐಡಿ ಕಾರ್ಡ್ ವಿತರಿಸಲು ಶೇಕಡ 40ಕ್ಕಿಂತ ಕಡಿಮೆ ಅಂಗವೈಕಲ್ಯ ಇರಬಾರದು ಎಂಬ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಶೇಕಡ 40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೂ ನಿರಾಕರಿಸದೆ ಅಂಗವೈಕಲ್ಯ ಪ್ರಮಾಣ ಪತ್ರಗಳನ್ನು ಮತ್ತು ಯುಡಿಐಡಿ ಕಾರ್ಡುಗಳನ್ನು ನೀಡಬಹುದು ಎಂದು ನಿರ್ದೇಶಿಸಿದ್ದಾರೆ.