ಉಡುಪಿ: ಮಣಿಪಾಲದಲ್ಲಿ ಶಿವರಾತ್ರಿಯಂದು ಅನಾಥವಾಗಿ ಸಿಕ್ಕ ಗಂಡು ಕರುವನ್ನು ರಕ್ಷಿಸಿದ ಇಲ್ಲಿನ ಸಮಾಜ ಸೇವಕರೊಬ್ಬರು ಅದಕ್ಕೆ ‘ಟೈಗರ್ ಶಿವ’ ಎಂದು ನಾಮಕರಣ ಮಾಡಿದರು. ಕರುವಿನ ಕಿವಿಯಲ್ಲಿ ಮೂರು ಬಾರಿ ಟೈಗರ್ ಶಿವ ಎಂದು ಹೇಳುವ ಮೂಲಕ ಶಾಸ್ತ್ರೋಕ್ತವಾಗಿ ನಾಮಕರಣ ನೆರವೇರಿಸಿದರು.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮಣಿಪಾಲದ ಶಾಂತಿನಗರದಲ್ಲಿರುವ ‘ನಿಮ್ಮ ಮನೆ’ ಅಂಗಳದಲ್ಲಿ ಕರುವಿಗೆ ತೊಟ್ಟಿಲು ಶಾಸ್ತ್ರವನ್ನು ಧಾರ್ಮಿಕ ವಿಧಿವಿಧಾನಗಳಂತೆ ಮಾಡಿದರು.
ಇದಕ್ಕೂ ಮುನ್ನ, ಶಾಂತಿನಗರ ಗಣೇಶೋತ್ಸವ ಸಭಾ ಭವನದಿಂದ ತೊಟ್ಟಿಲು ಶಾಸ್ತ್ರ ನಡೆಯುವ ಮಂಟಪದವರೆಗೆ ಹೂವುಗಳಿಂದ ಸಿಂಗರಿಸಿ ಮತ್ತು ಸೀತಾರಾಮ ಮಹಿಳಾ ಭಜನಾ ಮಂಡಳಿ ಉಡುಪಿ ಹಾಗೂ ಮಂಚಿ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರು ಟೈಗರ್ ಶಿವನನ್ನು ಮೆರವಣಿಗೆ ಮೂಲಕ ಕರೆತಂದರು.
ನಂತರ ಗೋಧೂಳಿ ಲಗ್ನದಲ್ಲಿ ಕರುವಿಗೆ ನಾಮಕರಣ ಮಾಡಿ ಆರತಿ ಬೆಳಗಿದರು. ಭಜನೆ ಮತ್ತು ಹೂವನ್ನು ಟೈಗರ್ ಶಿವನ ಮೇಲೆ ಸುರಿಸಿದರು. ತೊಟ್ಟಿಲಿನಲ್ಲಿ ಕರುವನ್ನಿಟ್ಟು, ತೂಗಿ ಸಂಭ್ರಮಿಸಿದರು.
ಶೋಭ ಕುಮಾರ್ ಶೆಟ್ಟಿ ಎಂಬವರು ಸ್ವಾತಂತ್ರ್ಯಾ ಪೂರ್ವ ಕಾಲದ (1945) ಹಿತ್ತಾಳೆಯ ತೊಟ್ಟಿಲನ್ನು ನೀಡಿದರು. ದಾನಿಗಳು ಉಚಿತ ಉಪಹಾರ ಮತ್ತು ಹೂವಿನಲಂಕಾರ ಮಾಡಿಸಿದ್ದರು.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, “ಟೈಗರ್ ಶಿವನ ತಾಯಿ ಒಂದು ಬೀಡಾಡಿ ದನವಾಗಿತ್ತು. ಇದು ಮಣಿಪಾಲದ ಹೃದಯ ಭಾಗದಲ್ಲಿರುವ ಟೈಗರ್ ಸರ್ಕಲ್ನಲ್ಲಿ ಶಿವರಾತ್ರಿಯ ದಿನ ಗಂಡು ಕರುವಿಗೆ ಜನ್ಮ ನೀಡಿತ್ತು. ಸ್ಥಳೀಯರೊಬ್ಬರು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ನಾನು ಮಣಿಪಾಲಕ್ಕೆ ಹೋಗಿ ನೋಡಿದಾಗ ಕರು ಅನಾಥವಾಗಿತ್ತು. ಅಲ್ಲೇ ಇದ್ದರೆ ಕರುವಿಗೆ ಅಪಾಯವಾಗುವ ಸಾಧ್ಯತೆ ಇತ್ತು. ಆದ್ದರಿಂದ ರಕ್ಷಿಸಿ, ಸ್ವಲ್ಪ ದಿನ ಹೊಸಬೆಳಕು ಆಶ್ರಮದಲ್ಲಿ ಪೋಷಣೆ ಮಾಡಿದ್ದೇವೆ. ಟೈಗರ್ ಸರ್ಕಲ್ನಲ್ಲಿ ಶಿವರಾತ್ರಿಯ ದಿನ ಕರು ಸಿಕ್ಕಿದ್ದರಿಂದ ಟೈಗರ್ ಶಿವ ಎಂದು ನಾಮಕರಣ ಮಾಡಿದ್ದೇವೆ” ಎಂದು ತಿಳಿಸಿದರು.