ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ಅವರನ್ನು ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಮಾರ್ಚ್ 29 ರಂದು ಹೊರಡಿಸಿದ್ದ ಆದೇಶ ಪತ್ರದಂತೆ ಸಂಪುಟದ ನೇಮಕಾತಿ ಸಮಿತಿಯು, ನಿಧಿ ತಿವಾರಿ ಅವರ ನೇಮಕಾತಿ ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದೆ.
ಪ್ರಧಾನ ಮಂತ್ರಿ ಕಚೇರಿಯ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಿಧಿ ತಿವಾರಿ ಈಗ ಹೊಸ ಹುದ್ದೆಗೆ ನೇಮಕಗೊಂಡಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿ ನಿಧಿ ತಿವಾರಿ ಅವರನ್ನು ನೇಮಕ ಮಾಡಲಾಗಿದೆ.
ನಿಧಿ ತಿವಾರಿ ಉತ್ತರ ಪ್ರದೇಶದ ವಾರಣಾಸಿಯ ಮೆಹಮುರ್ಗಂಜ್ ಮೂಲದವರು.ಉತ್ತರ ಪ್ರದೇಶದ ವಾರಣಾಸಿ 2014ರಿಂದ ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರವಾಗಿದೆ. ನಿಧಿ ತಿವಾರಿ ಅವರು 2014 ರ ಬ್ಯಾಚ್‌ನ ನಾಗರಿಕ ಸೇವಾ ಅಧಿಕಾರಿಯಾಗಿ ಸೇರಿದರು. ನಿಧಿ ತಿವಾರಿ ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 96ನೇ ರ‍್ಯಾಂಕ್ ಗಳಿಸಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೊದಲು, ಅವರು ವಾರಣಾಸಿಯಲ್ಲಿ ಸಹಾಯಕ ಆಯುಕ್ತರಾಗಿ (ವಾಣಿಜ್ಯ ತೆರಿಗೆ) ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗಲೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ವರದಿ ತಿಳಿಸಿದೆ. ನಿಧಿ ತಿವಾರಿ ಅವರು 2022 ರಲ್ಲಿ ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಅಧೀನ ಕಾರ್ಯದರ್ಶಿಯಾಗಿ ಸೇರಿದರು. ಜನವರಿ 6, 2023 ರಿಂದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.