ತುರುವೇಕೆರೆ: ಏಪ್ರಿಲ್ 26 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಭಾರತೀಯರನ್ನು ಹತ್ಯೆಗೈದ ಉಗ್ರಗಾಮಿಗಳನ್ನು ಬಂಧಿಸಿ ಕ್ರೂರ ಶಿಕ್ಷೆಗೆ ಗುರಿಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕು ನಾಗರೀಕ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಇಂದು ಪಟ್ಟಣದಲ್ಲಿಂದು ಮೌನ ಪ್ರತಿಭಟನೆ ನಡೆಸಿತು.
ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿರುವ ಭಾರತದ ಅಭಿವೃದ್ದಿಯ ವೇಗವನ್ನು ಸಹಿಸಲಾಗದೆ ಉಗ್ರಗಾಮಿಗಳು, ಭಯೋತ್ಪಾದಕರು ದೇಶದ ನಾಗರೀಕರ ಮೇಲೆ ಅಮಾನುಷವಾಗಿ ಗುಂಡಿನ ದಾಳಿ ನಡೆಸಿ ಹತ್ಯಗೈದಿರುವುದನ್ನು ಇಡೀ ದೇಶ ಖಂಡಿಸುತ್ತದೆ. 26 ಭಾರತೀಯ ನಾಗರೀಕರ ಹತ್ಯೆಗೈದಿರುವ ಉಗ್ರರನ್ನು ಹುಡುಕಿ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದೇಶದ ನಾಗರೀಕರು ನೆಮ್ಮದಿಯಿಂದ ಭಯಮುಕ್ತವಾಗಿ ಬದುಕು ಸಾಗಿಸಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಹಾಗೂ ಭಯೋತ್ಪಾದನೆ, ಉಗ್ರಗಾಮಿಗಳ ಮಟ್ಟ ಹಾಕಲು ವಿಶೇಷ ಕಾನೂನನ್ನು ರಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನೆಹರು ವೃತ್ತದಲ್ಲಿ ಮಾನವ ಸರಪಳಿ ಹಾಕಿ ಉಗ್ರರ ಕ್ರಮವನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಪಪಂ ಮಾಜಿ ಅಧ್ಯಕ್ಷ ಹೆಚ್.ಆರ್. ರಾಮೇಗೌಡ, ಲಯನ್ಸ್ ಅಧ್ಯಕ್ಷ ರಂಗನಾಥ್, ಮಾಜಿ ಅಧ್ಯಕ್ಷ ಗಂಗಾಧರ ದೇವರಮನೆ, ಚೌದ್ರಿ ನಾಗೇಶ್, ವಕೀಲ ಧನಪಾಲ್, ಸಾಹಿತಿ ತುರುವೇಕೆರೆ ಪ್ರಸಾದ್, ಇನ್ನರ್ ವೀಲ್ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಅಧ್ಯಕ್ಷೆ ನೇತ್ರಾವತಿ ಸಿದ್ದಲಿಂಗಸ್ವಾಮಿ, ಕಸಾಪ ಅಧ್ಯಕ್ಷ ಡಿ.ಪಿ. ರಾಜು, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ, ಉಷಾಶ್ರೀನಿವಾಸ್, ಸುಷ್ಮ ಕೃಷ್ಣಚೈತನ್ಯ, ಮಮತ ಅಶೋಕ್, ಕೊಂಡಜ್ಜಿ ಕುಮಾರ್, ಡಿ.ಎಸ್.ಎಸ್. ಸಂಚಾಲಕ ಕೃಷ್ಣಮಾದಿಗ, ಕೆಂಪರಾಜ್, ಪ್ರಸನ್ನ ಕುಮಾರ್, ನಂಜೇಶ್, ವೆಂಕಟೇಶ್, ಸುರೇಶ್ ಹಾಗೂ ಕನ್ನಡ ಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸಿಐಟಿಯು, ಮುಸಲ್ಮಾನ್ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್