ತಿಪಟೂರು: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಹಾಗೂ ಹಿಂದೂ ಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ತಿಪಟೂರು ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ನಾಗರಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಬೆಂಬಲ ಸೂಚಿಸಿದರು. ನಗರದ ಬಿ.ಎಚ್.ರಸ್ತೆ ರೈಲ್ವೆ ಸ್ಟೇಷನ್ ರಸ್ತೆ ,ಹಾಲ್ಕುರಿಕೆ ರಸ್ತೆ, ಎ.ಪಿ.ಎಂ.ಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು.
ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು, ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ತಿಪಟೂರು ಪ್ರತಿಭಟನಾ ಮೆರವಣಿಗೆಯು ಕೋಡಿ ಸರ್ಕಲ್, ದೊಡ್ಡಪೇಟೆ, ಬಿ.ಹೆಚ್.ರಸ್ತೆ ಮೂಲಕ ಸಾಗಿ ನಗರಸಭಾ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ, ಪಹಲ್ಗಾಮ್ ನಲ್ಲಿ ಪ್ರವಾಸಕ್ಕೆ ತೆರಳಿದ ಅಮಾಯಕರ ಹಿಂದೂಗಳ ಮೇಲೆ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಖಂಡನೀಯ ಎಂದರು.
ಭಾರತ ಸರ್ಕಾರ ಭಯೋತ್ಪಾದಕರು ಹಾಗೂ ಭಯೋತ್ಪಾದಕರನ್ನು ಪೋಷಣೆ ಮಾಡುತ್ತಿರುವ ಪಾಕಿಸ್ತಾನದ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದ ಅವರು, ಧರ್ಮದ ಆಧಾರದಲ್ಲಿ ದಾಳಿ ಮಾಡಿ ಅಮಾಯಕರ ಹತ್ಯೆ ನಡೆಸಿರುವುದು ಹಿಂದೂಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಭಾರತದ ದೇಶದಲ್ಲಿ ಹಿಂದೂಗಳು ಒಗ್ಗಟ್ಟಾಗದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಹಿಂದೂಗಳ ಮೇಲೆ ನಡೆದಿರುವ ಭಯೋತ್ಪಾದಕ ದಾಳಿ ತೀವ್ರ ಖಂಡನೀಯವಾಗಿದೆ. ಪ್ರವಾಸಕ್ಕೆ ತೆರಳಿದ್ದ ಅಮಾಯಕರ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸುವ ಮೂಲಕ ಭಾರತದ ಸಮಸ್ತ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ. ರಾಷ್ಟ್ರೀಯತೆ ವಿಚಾರ ಬಂದಾಗ ನಾವೆಲ್ಲರೂ ಒಂದು ಎಂಬುದನ್ನ ಪ್ರತಿಯೊಬ್ಬರು ಒಗ್ಗಟ್ಟಿನಿಂದ ನಿರೂಪಿಸಬೇಕಿದೆ, ಸಮಸ್ತ ಭಾರತೀಯರು ದೇಶದ ರಕ್ಷಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈಗೆ ಅಧಿಕಾರ ನೀಡಿದ್ದೇವೆ. ತಾವು ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ಬಳಸಿ, ಭಾರತದ ಭಾಗವಾಗಿರುವ ಪಿಓಕೆಯನ್ನ ವಶಪಡಿಸಿಕೊಳ್ಳಬೇಕು. ಭಯೋತ್ಪಾದಕರನ್ನು ಪೋಷಣೆ ಮಾಡಿ ಹಿಂದುಗಳಿಗೆ ಹಾಗೂ ಭಾರತಕ್ಕೆ ಸದಾ ತೊಂದರೆ ನೀಡುತ್ತಿರುವ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಉಗ್ರಗಾಮಿಗಳು ಹಾಗೂ ಉಗ್ರ ಪೋಷಕರನ್ನ ನಾಶಗೊಳಿಸಬೇಕು ಎಂದರು.
ಭಾರತೀಯ ಸೈನ್ಯದೊಂದಿಗೆ ನಾವೆಲ್ಲರೂ ಸದಾ ಬೆಂಬಲವಾಗಿರುತ್ತೇವೆ. ಇಡೀ ಜಗತ್ತಿನಲ್ಲಿ ಹಿಂದುಗಳಿಗಾಗಿ ಇರುವ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರ ಆದರೆ ಮುಸಲ್ಮಾನರು, ಕ್ರೈಸ್ತ ಧರ್ಮೀಯರಿಗೆ ಜಗತ್ತಿನ ಹಲವಾರು ದೇಶಗಳಿವೆ. ಹಿಂದೂ ರಾಷ್ಟ್ರವಾದ ಭಾರತವನ್ನು ನಾವು ರಕ್ಷಣೆ ಮಾಡಿ ಸುಭದ್ರ ಗೊಳಿಸದಿದ್ದರೆ, ಇಡೀ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ. ದೇಶದ ಪ್ರತಿಯೊಬ್ಬ ಹಿಂದೂ ಸಹ ಎಚ್ಚೆತ್ತುಕೊಳ್ಳಬೇಕು, ಹಿಂದೂ ಪರವಾದ ಸರ್ಕಾರವಿರುವ ಕೇಂದ್ರ ಸರ್ಕಾರ ತಕ್ಷಣ ಯುದ್ಧ ಸಾರಿ ಭಯೋತ್ಪಾದಕತೆಯನ್ನು ಸಂಪೂರ್ಣ ನಾಶಗೊಳಿಸಬೇಕು ಎಂದು ಒತ್ತಾಯಿಸಿದರು.
ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕುಪ್ಪುರು ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ, ಖ್ಯಾತ ವಕೀಲರಾದ ಶ್ರೀಶ, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಮಡೇನೂರು ವಿನಯ್, ಸಂಸ್ಕಾರ ಭಾರತಿ ಅಧ್ಯಕ್ಷ ಭವಾನಿಶಂಕರ್, ಆನಂದ್, ಮಾಜಿ ನಗರಸಭಾ ಸದಸ್ಯ ರಾಮ್ ಮೋಹನ್, ನಗರಸಭೆ ಮಾಜಿ ಸದಸ್ಯ ಪ್ರಸನ್ನ ಕುಮಾರ್,ಸದಸ್ಯರಾದ ಸಂಗಮೇಶ್, ತರಕಾರಿ ಗಂಗಾಧರ್, ವೈದ್ಯರಾದ ಡಾ|| ಶ್ರೀಧರ್,ಡಾ||ವಿವೇಚನ್, ಸುದರ್ಶನ್, ಆರ್.ಎಸ್ ಮನೋಹರ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ನಾಗರೀಕರು ಉಪಸ್ಥಿತರಿದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ