ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ವಾಯುನೆಲೆಗಳ ಮೇಲಿನ ಭಾರತದ ದಾಳಿಯನ್ನು ಇದುವರೆಗೂ ನಿರಾಕರಿಸುತ್ತಲೇ ಬಂದಿದ್ದ ಪಾಕ್ ಪ್ರಧಾನಿ ಪ್ರಧಾನಿ ಶೆಹಬಾಜ್ ಷರೀಫ್, ಇದೀಗ ಭಾರತೀಯ ಸೇನಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಮೇ 10ರಂದು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ತಾಣಗಳನ್ನು ಹೊಡೆದುರುಳಿಸಿವೆ ಎಂದು ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿರುವ ಷರೀಫ್, “ಮೇ 10ರಂದು ಬೆಳಗಿನಜಾವ 2:30ರ ಸುಮಾರಿಗೆ, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನನಗೆ ಕರೆ ಮಾಡಿ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿರುಳಿಸಿದ್ದಾಗಿ ಮಾಹಿತಿ ನೀಡಿದರು. ದಾಳಿಯ ವೇಳೆ ನಮ್ಮ ವಾಯುಪಡೆಯು ದೇಶವನ್ನು ಉಳಿಸಲು ಸ್ಥಳೀಯ ತಂತ್ರಜ್ಞಾನ ಮತ್ತು ಚೀನೀ ಜೆಟ್ಗಳನ್ನು ಬಳಸಿತ್ತು. ಆದರೆ, ಭಾರತದ ಕ್ಷಿಪಣಿಗಳು ತಮ್ಮ ಗುರಿ ಸಾಧಿಸಿ ಹೊಡೆದುರುಳಿಸಿವೆ ಎಂದು ದೃಢಪಡಿಸಿದ್ದಾರೆ” ಎಂದು ಹೇಳಿದ್ದಾರೆ.
ಈ ಕುರಿತು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಜನರಲ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30ಕ್ಕೆ ತಮಗೆ ಕರೆ ಮಾಡಿ ಭಾರತ ನೂರ್ ಖಾನ್ ವಾಯುನೆಲೆ ಮತ್ತು ಇತರ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿಳಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
‘ಪಾಕಿಸ್ತಾನದೊಳಗೆ ದಾಳಿ ನಡೆದ ಸುದ್ದಿಯಿಂದ ಪ್ರಧಾನಿ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಿದ್ದಾರೆ. ಇದು ಆಪರೇಷನ್ ಸಿಂಧೂರದ ನಿಖರತೆ ಮತ್ತು ಧೈರ್ಯವನ್ನು ತೋರಿಸುತ್ತದೆೆ’ ಎಂದಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಮಿಲಿಟರಿ ಪ್ರತಿಕ್ರಿಯೆಯಾಗಿ ಭಾರತವು ಮೇ 7ರಂದು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಕೈಗೊಂಡಿತ್ತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ, ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳ ನಂಟಿರುವ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು.
ದಾಳಿಯ ನಂತರ, ಪಾಕಿಸ್ತಾನವು ನಿಯಂತ್ರಣ ರೇಖೆ ಮತ್ತು ಜಮ್ಮು ಮತ್ತು ಕಾಶ್ಮೀರದ ಗಡಿಯಾಚೆಗೆ ಶೆಲ್ ಮತ್ತು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿಗೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ 11 ವಾಯುನೆಲೆಗಳಲ್ಲಿ ರಾಡಾರ್ ಮೂಲಸೌಕರ್ಯ, ಸಂವಹನ ಕೇಂದ್ರಗಳು ಮತ್ತು ವಾಯುನೆಲೆಗಳ ಮೇಲೆ ಸಂಘಟಿತ ಕ್ಷಿಪಣಿ ದಾಳಿ ಮಾಡಿತ್ತು. ಬಳಿಕ ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಘೋಷಿಸಲಾಯಿತು.




