ಹಿಸಾರ್ (ಹರಿಯಾಣ): ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಹರಿಯಾಣ ಮೂಲದ ಮಹಿಳಾ ಯೂಟ್ಯೂಬರ್ ಒಬ್ಬರನ್ನು ಹಿಸಾರ್ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿ ಮಲ್ಹೋತ್ರಾ ಬಂಧಿತ ಮಹಿಳಾ ಯೂಟ್ಯೂಬರ್.
“ಟ್ರಾವೆಲ್ ವಿತ್-ಜೋ” ಎಂಬ ಟ್ರಾವೆಲ್ ವ್ಲಾಗರ್ ನಡೆಸುತ್ತಿದ್ದ ಜ್ಯೋತಿ, ಪ್ರವಾಸದ ಸಮಯದಲ್ಲಿ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಅಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಎಂಬುವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಲ್ಲದೇ ಭಾರತದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದು ತಿಳಿದುಬಂದಿದೆ. ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದರ ಬಗ್ಗೆ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು, ಈ ಆರೋಪದ ಹಿನ್ನೆಲೆಯಲ್ಲಿ ಟ್ರಾವೆಲ್ ವ್ಲಾಗರ್ ಜ್ಯೋತಿಯನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ಹೋಗಿದ್ದ ಜ್ಯೋತಿ ಮಲ್ಹೋತ್ರಾ: ”ಬಂಧಿತ ಮಹಿಳಾ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ, “ಟ್ರಾವೆಲ್ ವಿತ್-ಜೋ” ಎಂಬ ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಚಾನೆಲ್ ನಡೆಸುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ತಾನು, 2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಆರೋಪಿ ಜ್ಯೋತಿ ಬಾಯ್ಬಿಟ್ಟಿದ್ದಾಳೆ ಎಂದು” ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
”2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಲುವಾಗಿ ವೀಸಾ ಪಡೆಯಲು ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಹೋಗಿದ್ದೆ. ಅಲ್ಲಿ ಡ್ಯಾನಿಶ್ ಎಂಬ ಸಿಬ್ಬಂದಿಯನ್ನು ಭೇಟಿಯಾಗಿದ್ದು, ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದೆ. ನಂತರ ಅವರ ಜೊತೆ ಸಂಪರ್ಕದಲ್ಲಿದ್ದೆ. ಬಳಿಕ ಎರಡು ಬಾರಿ ಪಾಕಿಸ್ತಾನಕ್ಕೂ ಭೇಟಿ ನೀಡಿದ್ದೆ. ಅಲ್ಲಿ ಅಹ್ಸಾನ್ ಅವರ ಸಲಹೆಯ ಮೇರೆಗೆ, ಅವರ ಪರಿಚಯಸ್ಥ ಅಲಿ ಅಹ್ವಾನ್ ಅವರನ್ನು ಭೇಟಿ ಕೂಡ ಆಗಿದ್ದೆ. ನನ್ನ ವಾಸ್ತವ್ಯ ಮತ್ತು ಪ್ರಯಾಣಕ್ಕೆ ಅಲಿ ವ್ಯವಸ್ಥೆ ಮಾಡಿದ್ದರು” ಎಂದು ಜ್ಯೋತಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.
ಪಾಕಿಸ್ತಾನಕ್ಕೆ ಮಾಹಿತಿ ರವಾನೆ: ”ಜ್ಯೋತಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್ ಮಾಡುತ್ತಿದ್ದಲ್ಲದೇ ವಾಟ್ಸ್ಆ್ಯಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಎಂಬ ವ್ಯಕ್ತಿ ಸೇರಿದಂತೆ ಇತರ ಪಾಕ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಳು. ಶಕೀರ್‌ನ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಅದನ್ನು ಜಟ್ ರಾಂಧವ ಎಂಬ ಹೆಸರಿನಲ್ಲಿ ತನ್ನ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದ ಜ್ಯೋತಿ ಪಾಕಿಸ್ತಾನಕ್ಕೆ ರಾಷ್ಟ್ರವಿರೋಧಿ ಮಾಹಿತಿ ರವಾನೆ ಮಾಡಿರುವುದು, ಹಾಗೆಯೇ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಅಧಿಕಾರಿ ಅಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರನ್ನು ಹಲವು ಬಾರಿ ಭೇಟಿ ಕೂಡ ಆಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ” ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಜ್ಯೋತಿ ಮಲ್ಹೋತ್ರಾ ಬಂಧನ: ಗೂಢಚರ್ಯೆ ಪ್ರಕರಣದಲ್ಲಿ ಹಿಸಾರ್ ಪೊಲೀಸರು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಆಕೆ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಭಾರತದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದು ಕೂಡ ತಿಳಿದು ಬಂದಿದೆ. ಜ್ಯೋತಿ ಪಾಕಿಸ್ತಾನಕ್ಕೆ ಹೋಗಲು ಸಹಾಯ ಕೂಡ ಮಾಡಿದ್ದು, ಪಾಕಿಸ್ತಾನದೊಂದಿಗೆ ಸೂಕ್ಷ್ಮ ಮಾಹಿತಿ ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದಡಿ ಜ್ಯೋತಿ ಬಂಧಿಸಿರುವ ಪೊಲೀಸರು ಆಕೆಯನ್ನು ಹರಿಯಾಣದ ಹಿಸಾರ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಸದ್ಯ ಆಕೆಯನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




