ಇಸ್ಲಾಮಾಬಾದ್ : ಪಾಕಿಸ್ತಾನದ ಖ್ಯಾತ ನಟಿ ಹಾಗೂ ರೂಪದರ್ಶಿ ಹುಮೈರಾ ಅಸ್ಗರ್ ಅಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಶವ ಕರಾಚಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ.
ಹುಮೈರಾ ರಿಯಾಲಿಟಿ ಟಿವಿ ಸರಣಿ ತಮಾಶಾ ಘರ್ ಮತ್ತು ಪಾಕಿಸ್ತಾನಿ ಚಲನಚಿತ್ರ ಜಲೈಬೀಯಲ್ಲಿ ನಟಿಸಿ ಖ್ಯಾತಿಗಳಿಸಿದ್ದರು.ಆಕೆಗೆ ಕೇವಲ 30 ವರ್ಷವಾಗಿದ್ದು, ಕಳೆದ ಕೆಲವು ವರ್ಷಗಳಿಂದ ತನ್ನ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ವರದಿಯ ಪ್ರಕಾರ ಹುಮೈರಾ ವಾಸವಿದ್ದ ಅಪಾರ್ಟ್ಮೆಂಟ್‌ನಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ನೆರೆಹೊರೆಯವರು ಗಮನಿಸಿದ್ದಾರೆ.
ಮಾತ್ರವಲ್ಲದೇ ಹುಮೈರಾಳನ್ನು ಕೆಲ ದಿನಗಳಿಂದ ಅಲ್ಲಿನ ನಿವಾಸಿಗಳು ಕೂಡಾ ನೋಡಿರಲಿಲ್ಲ. ಹೀಗಾಗಿ ಅನುಮಾನಗೊಂಡ ಜನ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರಿಗೆ ಈ ಬಗ್ಗೆ ಕರೆ ಬಂದಿದ್ದು, ತಕ್ಷಣ ತಪಾಸಣೆಗಾಗಿ ಹುಮೈರಾ ನಿವಾಸಕ್ಕೆ ಧಾವಿಸಿದ್ದಾರೆ. ಮನೆಯ ಬಾಗಿಲು ಬಡಿದರೂ ಯಾರೂ ಉತ್ತರಿಸದಿದ್ದಾಗ ಪೊಲೀಸರು ಬಾಗಿಲನ್ನು ಒಡೆದು ಒಳಗಡೆ ಹೋಗಿದ್ದಾರೆ. ಈ ವೇಳೆ ನಟಿಯ ಶವ ನೆಲದಲ್ಲಿ ಬಿದ್ದುಕೊಂಡಿರುವುದನ್ನು ಪೊಲೀಸರು ಕಂಡಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ ಹುಮೈರಾ ಅಸ್ಗರ್ ಅಲಿ ಅವರ ಸಾವಿನ ಬಗ್ಗೆ ಯಾವುದೇ ಅನುಮಾನ ಕಂಡು ಬರದ ಹಿನ್ನೆಲೆ ನೈಸರ್ಗಿಕ ಸಾವು ಎಂದೇ ಪರಿಗಣಿಸಲಾಗುತ್ತಿದೆ. ಹೆಚ್ಚಿನ ತನಿಖೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.




