ಬೆಂಗಳೂರು ಹೊರವಲಯ ರಾಮನಗರದ ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಾರ್ಖಾನೆಯೊಂದರ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹವೊಂದು ಪತ್ತೆಯಾಗಿದ್ದು, ಭಾರೀ ವೈರಲ್ ಆಗಿದೆ.
ಬಿಡದಿಯ ಕಾರ್‌ನ ಸೀಟ್‌ಗಳನ್ನ ತಯಾರು ಮಾಡುವ ಕಾರ್ಖಾನೆಯ ಶೌಚಾಲಯದ ಗೋಡೆಯಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಬರೆದಿದ್ದು, ಜೊತೆಗೆ ಕನ್ನಡಿಗರ ಬಗ್ಗೆ ಕೂಡ ಅವ್ಯಾಚ್ಯ ಪದಗಳಿಂದ ಬರೆಯಲಾಗಿದೆ.ಸದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರೇ ಈ ಕೆಲಸ ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿದೆ.
ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಕಾರ್ಖಾನೆಯ ಆಡಳಿತ ಮಂಡಳಿ ಕೂಡ ಈ ಬಗ್ಗೆ ನೋಟಿಸ್ ಬೋರ್ಡ್ ನಲ್ಲಿ ಎಚ್ಚರಿಕೆ ನೀಡಿದ್ದು, ಈ ರೀತಿಯ ಬರವಣಿಗೆ ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ.
ಇದು ಮುಂದುವರೆದು ದೇಶದ ಕಾನೂನಿನ ಚೌಕಟ್ಟಿನಲ್ಲಿ ದೇಶದ್ರೋಹಿ ಅಪರಾಧವಾಗುತ್ತದೆ. ಅಂತಹ ಕಾರ್ಮಿಕರನ್ನ ಪೊಲೀಸರಿಗೆ ಒಪ್ಪಿಸಿ, ಜೈಲು ವಾಸವಾಗುವಂತೆ ಕ್ರಮವಹಿಸುತ್ತೇವೆ ಎಂದು ಹೇಳಿ ಸುಮ್ಮನಾಗಿದೆ.
ಸದ್ಯ ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಬಿಡದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಎಫ್‌ಐಆರ್ ದಾಖಲಾಗಿದೆ. ಅನಾಮಧೇಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ವ್ಯಕ್ತಿಯ ಈ ಬರಹದಿಂದ ಕನ್ನಡಕ್ಕೂ ಅವಮಾನವಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.