ಮೊಳಕಾಲ್ಮೂರು: ಪಟ್ಟಣದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ಮಾಸದ ಕೊನೆ ಮಂಗಳವಾರದ ಪ್ರಯುಕ್ತ ದೇವಿಯನ್ನು ವಿಶೇಷವಾಗಿ ಆಲಂಕಾರಿಸಿ ಸಂಜೆ ಪಲ್ಲಕ್ಕಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದಲ್ಲಿ ದೇವಿ ವಿಗ್ರಹಕ್ಕೆ ಜಲಾಭಿಷೇಕ, ತೈಲಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳನ್ನು ವಿಧಿವತ್ತಾಗಿ ಆಚರಿಸಿದ ಭಕ್ತರು ದೇವಿಗೆ ಮುತ್ತಿನ ಸರಗಳ ಅಲಂಕಾರ ನಡೆಸಿ ಆಕರ್ಷವಾಗಿ ಕಾಣುವಂತೆ ಮಾಡಿದ್ದರು. ಅನಂತರ ಕುಂಕುಮಾರ್ಚನೆ ಕೈಗೊಂಡು ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯನ್ನು ದೇವಸ್ಥಾನದ ಸುತ್ತಲೂ ಮೂರು ಸುತ್ತು ಸುತ್ತಿಸಿ ಆನಂತರ ಪಟ್ಟಣದ ಕುಕಾರಲಹಟ್ಟಿ ಮೂಲಕ ಕೆಇಬಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಸ್ವಸ್ಥಾನಕ್ಕೆ ಕರೆತಂದು ಗುಡಿ ತುಂಬಿಸಲಾಯಿತು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು, ದೇವಿಗೆ ಸಹಸ್ರ ನಾಮಾವಳಿ ಸೇರಿದಂತೆ ಇನ್ನಿತರ ಅರ್ಚನೆಗಳೊಂದಿಗೆ ಮಹಾ ಮಂಗಳಾರತಿ ಕೈಗೊಂಡಿದ್ದ ಭಕ್ತರು ಕೊನೆಯಲ್ಲಿ ಪ್ರಸಾದ ವಿನಿಯೋಗ ನಡೆಸಿದರು.
ವರದಿ: ಪಿಎಂ ಗಂಗಾಧರ




