ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗ ಆಗ್ರಹಿಸಿ ಹೋರಾಟಗಳನ್ನು ನಡೆಸಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ 10ರಂದು ಪಂಚಮಸಾಲಿ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಮೀಸಲಾತಿಗಾಗಿ 5 ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ಪ್ರತಿ ವರ್ಷ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಹೋರಾಡಿಇದ್ದೇವೆ. 2012 ರಲ್ಲಿ ಅಧಿವೇಶನ ವೇಳೆ ಮುತ್ತಿಗೆ ಹಾಕಿದಾಗಲೂ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಸ್ಪಂದಿಸಲಿಲ್ಲ.
2020 ರಲ್ಲಿ ಉಪವಾಸ ಸತ್ಯಾಗ್ರಹ ಮಾಡಿದರೂ ಅಂದಿನ ಯಡಿಯೂರಪ್ಪ ಸರ್ಕಾರ ಸ್ಪಂದಿಸಲಿಲ್ಲ. ಕಳೆದ ಅಧಿವೇಶನದಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಸಿಎಂ ಸಿದ್ದರಾಮಯ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿದೆ. ಪೊಲೀಸರು ನಿರ್ದಯವಾಗಿ ನಡೆದುಕೊಂಡಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 10ರಂದು ಪಂಚಮಸಾಲಿಗಳಿಂದ ಮೌನ ಪ್ರತಿಭಟನೆ ನಡೆಯಲಿದೆ.
ಬೆಳಗಾವಿಯ ಗಾಂಧಿ ಭವನದಿಂದ ಪ್ರತಿಭಟನೆ ಆರಂಭವಾಗಲಿದೆ. ಬಾಯಿ, ಕೈಗೆ ಕಪ್ಪು ಪಟ್ಟಿಕೊಂಡು ಮೌನ ಪ್ರತಿಭಟನೆ ಮಾಡುತ್ತೇವೆ. ಪಂಚಮಸಾಲಿ ಸಮಾಜದ ಮೇಲೆ ಆಗಿರೋ ದೌರ್ಜನ್ಯ ದಿನವಾಗಿ ಪ್ರತಿಭಟನೆ ಮಾಡಲಾಗುವುದು ಎಂದರು.
ಸರ್ಕಾರದಲ್ಲಿ ಇರುವ ಪಂಚಮಸಾಲಿ ಶಾಸಕರು, ಸಚಿವರುಗಳು ಮೀಸಲಾತಿ ವಿಚಾರ ಮಾತನಾಡಲು ಆಗದಿದ್ದರೆ ಕನಿಷ್ಠ ಲಾಠಿ ಜಾರ್ಚ್ ಘಟನೆಯನ್ನಾದರೂ ಖಂಡಿಸಲಿ. ಪಂಚಮಸಾಲಿ ಮೀಸಲಾತಿಗಾಗಿ ಶಾಸಕರು, ಸಚಿವರ ಮನೆಗಳಿಗೆ ತೆರಳಿ ಮನವಿ ಮಾಡಿದರೂ ಸ್ಪಂದಿಸದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.




