ತುರುವೇಕೆರೆ : ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನ ಪ್ರಭಾರಿ ಅಧ್ಯಕ್ಷರಾಗಿ ಸಂಘದ ಹಿರಿಯ ಉಪಾಧ್ಯಕ್ಷ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್.ಪಿ.ಪಾಪಣ್ಣ ಅಧಿಕಾರ ಸ್ವೀಕರಿಸಿದರು.
ಹಿಂದಿನ ಪ್ರಭಾರಿ ಅಧ್ಯಕ್ಷ ಷಣ್ಮುಖಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಂಘದ ಹಿರಿಯ ಉಪಾಧ್ಯಕ್ಷರಾಗಿದ್ದ ಹೆಚ್.ಪಿ.ಪಾಪಣ್ಣ ಅವರನ್ನು ಮುಂದಿನ ಆದೇಶದವರೆಗೆ ಸಂಘದ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಷಡಕ್ಷರಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸಂಘದ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನ ಪ್ರಭಾರಿ ಅಧ್ಯಕ್ಷರಾಗಿ ಹೆಚ್.ಪಿ.ಪಾಪಣ್ಣ ಅಧಿಕಾರ ಸ್ವೀಕರಿಸಿದರು. ಹಿಂದಿನ ಪ್ರಭಾರಿ ಅಧ್ಯಕ್ಷ ಷಣ್ಮುಖಪ್ಪ ಅಧಿಕಾರ ಹಸ್ತಾಂತರಿಸಿದರು.
ನೂತನ ಅಧ್ಯಕ್ಷ ಹೆಚ್.ಪಿ.ಪಾಪಣ್ಣ ಮಾತನಾಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ನೂತನ ಪ್ರಭಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶಿಸಿದ ರಾಜ್ಯಾಧ್ಯಕ್ಷ ಷಡಕ್ಷರಿ ಅವರಿಗೆ, ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ತುಂಬು ಮನಸ್ಸಿನಿಂದ ಸಹಕಾರ ನೀಡಿದ ಸಂಘದ ಎಲ್ಲಾ ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ಕಳೆದ ಕೆಲವು ತಿಂಗಳ ಹಿಂದೆ ನಡೆದ ಸಂಘದ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕರ ಆಯ್ಕೆ ನಡೆದು ಅಧ್ಯಕ್ಷರ ಆಯ್ಕೆಗೆ ಸಭೆ ಸೇರಿದ ಸಂದರ್ಭದಲ್ಲಿ ಸಂಘದ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಅಧ್ಯಕ್ಷ ಸ್ಥಾನವನ್ನು ಮೂರು ಅವಧಿಯಲ್ಲಿ ಮೂರು ಜನರು ವಹಿಸಲು ತೀರ್ಮಾನಿಸಿ ಮೊದಲ ಬಾರಿಗೆ ವೈದ್ಯರಾದ ಡಾ.ನವೀನ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಅವರು ತುರುವೇಕೆರೆಯಿಂದ ವರ್ಗಾವಣೆಗೊಂಡ ನಂತರದಲ್ಲಿ ಷಣ್ಮುಖಪ್ಪನವರು ಪ್ರಭಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಈಗ ಅವರು ರಾಜೀನಾಮೆ ನೀಡಿದ್ದರ ಹಿನ್ನೆಲೆ ಹೊಸ ಅಧ್ಯಕ್ಷರ ಆಯ್ಕೆಯಾಗಬೇಕಿತ್ತು. ಮೂರು ದಶಕಗಳ ಸೇವಾ ಹಿರಿತನ ಹಾಗೂ ಎಲ್ಲಾ ನಿರ್ದೇಶಕರ ಸಹಮತದ ಕಾರಣವಾಗಿ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರು ನನ್ನನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದ್ದಾರೆ. ಸಂಘದ ಮಾಜಿ ಅಧ್ಯಕ್ಷರುಗಳ ಮಾರ್ಗದರ್ಶನ, ಎಲ್ಲಾ ನಿರ್ದೇಶಕರು, ಸರ್ಕಾರಿ ನೌಕರರ ಸಹಕಾರದೊಂದಿಗೆ ಸಂಘದ ಶ್ರೇಯೋಭಿವೃದ್ದಿಗೆ ದುಡಿಯುತ್ತೇನೆ ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಪಿ.ಪಾಪಣ್ಣ ಅವರಿಗೆ ನೌಕರರ ಸಂಘದ ಮಾಜಿ ಅಧ್ಯಕ್ಷರುಗಳು, ಹಾಲಿ ನಿರ್ದೇಶಕರುಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಹಿತೈಷಿಗಳು ಪುಷ್ಪಾಹಾರ ಅರ್ಪಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಪ್ರಭಾರಿ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕೇಶ್, ಮಾಜಿ ಅಧ್ಯಕ್ಷರಾದ ಡಾ.ನವೀನ್, ದೇವಿಹಳ್ಳಿ ಮಂಜುನಾಥ್, ಪ್ರಹ್ಲಾದ್, ಎನ್.ಪಿ.ಎಸ್. ಅಧ್ಯಕ್ಷ ಮನು, ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ವಿ.ಎನ್.ನಂಜೇಗೌಡ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ್, ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಸಂತ ಕುಮಾರ್, ಆಹಾರ ಇಲಾಖೆಯ ಕೃಷ್ಣೇಗೌಡ, ಆರೋಗ್ಯ ಇಲಾಖೆಯ ಗುರುರಾಜ್, ಮುಖಂಡರಾದ ಟಿ.ಹೊಸಹಳ್ಳಿ ದೇವರಾಜ್, ಹುಲಿಕಲ್ ಲೋಕೇಶ್, ಹಾವಾಳ ಶಿವಕುಮಾರ್, ಮೋಹನ್ ಸೇರಿದಂತೆ ವಿವಿಧ ಇಲಾಖೆಯ ನೌಕರರು, ಸಿಬ್ಬಂದಿಗಳು ಶುಭಹಾರೈಸಿದರು.
ವರದಿ: ಗಿರೀಶ್ ಕೆ ಭಟ್




