ಹಾವೇರಿ: ಜಿಲ್ಲೆಯ ಸವಣೂರಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೊಬ್ಬನಿಗೆ ಪೋಷಕರು ಮತ್ತು ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಆರೋಪಿ ಶಿಕ್ಷಕ ಜಗದೀಶ್‌ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಓರ್ವ ಶಿಕ್ಷಕನಿಗೆ ಸ್ಥಳೀಯರು ಮತ್ತು ಪೋಷಕರು ಧರ್ಮದೇಟು ನೀಡಿ, ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಸವಣೂರಿನ ಸರ್ಕಾರಿ ಉರ್ದು ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ಶಾಲಾ ಆವರಣಕ್ಕೆ ಧಾವಿಸಿದ್ದಾರೆ. ಆರೋಪಿ ಶಿಕ್ಷಕ ಜಗದೀಶ್‌ನನ್ನು ಹಿಡಿದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಕಾಮುಕ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.
ಆಕ್ರೋಶ ಭರಿತರಾದ ಪೋಷಕರು ಮತ್ತು ಸ್ಥಳೀಯರು, ಶಾಲೆ ಆವರಣದಿಂದಲೇ ಶಿಕ್ಷಕನಿಗೆ ಹೊಡೆಯುತ್ತಾ, ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ಸವಣೂರು ಪೊಲೀಸ್ ಠಾಣೆಯವರೆಗೆ ಕರೆದುಕೊಂಡು ಬಂದಿದ್ದಾರೆ. ಸವಣೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ರಮೇಶ್ ತಾಳಿಕೋಟಿ




