ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಉತ್ತರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸದನದಿಂದ ಸಭಾತ್ಯಾಗ ಮಾಡಿದ ಘಟನೆ ನಡೆದಿದೆ. ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ‘ಕರ್ನಾಟಕ ಧನ ವಿನಿಯೋಗ ವಿಧೇಯಕ’ಕ್ಕೆ ಅಂಗೀಕಾರ ಪಡೆಯಲಾಯಿತು.
ಮನುವಾದಿಗಳ ವಿರೋಧ ಎಂದ ಸಿಎಂ:
ಬಜೆಟ್ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಈ ಬಜೆಟ್‌ಗೆ ಮನುವಾದಿಗಳ ವಿರೋಧವಿದೆ” ಎಂದು ಹೇಳಿಕೆ ನೀಡಿದರು. ಸಿಎಂ ಅವರ ಈ ಹೇಳಿಕೆ ಬಿಜೆಪಿ ಸದಸ್ಯರನ್ನು ಕೆರಳಿಸಿತು.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ಈ ವೇಳೆ ಸದನದಿಂದ ಹೊರನಡೆಯುತ್ತಿದ್ದ ಬಿಜೆಪಿ ಸದಸ್ಯರನ್ನು ಕಂಡು ಕಾಂಗ್ರೆಸ್ ಸದಸ್ಯರು ‘ಶೇಮ್ ಶೇಮ್’ ಎಂದು ಕೂಗುವ ಮೂಲಕ ಲೇವಡಿ ಮಾಡಿದರು.
ಭೋಜೇಗೌಡರಿಗೆ ಸಿಎಂ ಟಾಂಗ್:
ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಕೂಡ ಎದ್ದು ಹೊರನಡೆಯಲು ಮುಂದಾದರು.
ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು, “ಹೇ ಭೋಜೇಗೌಡ, ನೀನು ಎಲ್ಲಿ ಹೋಗ್ತೀಯ? ಕುಳಿತುಕೋ ಇಲ್ಲಿ” ಎಂದು ಏಕವಚನದಲ್ಲೇ ಹಾಸ್ಯ ಮಿಶ್ರಿತವಾಗಿ ತಡೆದ ಪ್ರಸಂಗವೂ ನಡೆಯಿತು.
ಧನ ವಿನಿಯೋಗ ವಿಧೇಯಕ ಅಂಗೀಕಾರ:
ಬಿಜೆಪಿ ಸದಸ್ಯರು ಸದನದಿಂದ ಹೊರನಡೆದ ನಂತರ, ವಿಪಕ್ಷಗಳ ಅನುಪಸ್ಥಿತಿಯಲ್ಲೇ ವಿಧಾನ ಪರಿಷತ್ತಿನಲ್ಲಿ ‘ಕರ್ನಾಟಕ ಧನ ವಿನಿಯೋಗ ವಿಧೇಯಕ’ವನ್ನು ಮಂಡಿಸಿ, ಅದಕ್ಕೆ ಅಂಗೀಕಾರ ಪಡೆಯಲಾಯಿತು. ಆಡಳಿತ ಪಕ್ಷದ ಸದಸ್ಯರ ಬೆಂಬಲದೊಂದಿಗೆ ವಿಧೇಯಕವು ಯಾವುದೇ ಅಡೆತಡೆಯಿಲ್ಲದೆ ಪಾಸಾಯಿತು.




