ತುಮಕೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಎಷ್ಟೇ ಬಿಸಿ ಮುಟ್ಟಿಸಿದರೂ ಕೂಡ ಕೆಲ ಸರ್ಕಾರಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಲಂಚದ ಹೆಸರಿನಲ್ಲಿ ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ತಮುಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡ್ಲಾಪುರ ಗ್ರಾಮ ಪಂಚಾಯತಿಯ ಪಿಡಿಓ ಇ-ಖಾತಾ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಸಾವಿರಾರು ರೂಪಾಯಿ ಲಂಚ ಸ್ವೀಕರಿಸುವ ವೇಳೆಗೆ ರೆಂಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಕೋಡ್ಲಾಪುರ ಗ್ರಾಮ ಪಂಚಾಯತಿಯ ಪಿಡಿಒ ಪುಂಡಪ್ಪ ಹಾಗೂ ಬಿಲ್ ಕಲೆಕ್ಟರ್ ಹನುಮಂತರಾಯಪ್ಪ ಮಧುಗಿರಿ ತಾಲೂಕಿನ ವೀರನಗೇನಹಳ್ಳಿ ಗ್ರಾಮದ ಕೆ.ಹೆಚ್ ಆನಂದ್ ಕುಮಾರ್ ಎಂಬುವರಿಗೆ ಇ-ಖಾತಾ ನೀಡಲು 6,500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಸರ್ಕಾರದ ಆದೇಶವಿದ್ದರೂ ಕೂಡ ಇ-ಖಾತಾ ಮಾಡಿಸಲು ಸಾವಿರಾರು ರೂಪಾಯಿ ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಆನಂದ್ ಕುಮಾರ್ ತುಮಕೂರು ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು.
ಬಳಿಕ ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಹೇಳಿದಂತೆ ಇಂದು ಕೆ.ಹೆಚ್ ಆನಂದ್ ಕುಮಾರ್ ಇ-ಖಾತಾ ಪಡೆಯಲು ಹಣದೊಂದಿಗೆ ಕೋಡ್ಲಾಪುರ ಗ್ರಾಮ ಪಂಚಾಯತಿಗೆ ತೆರಳಿದ್ದರು.
ಪುಂಡಪ್ಪ 6,500 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ತುಮಕೂರು ಲೋಕಾಯುಕ್ತ ಡಿವೈಎಸ್‌ಪಿ ಶಿವರುದ್ರಪ್ಪ ಮೇಟಿ ನೇತೃತ್ವದ ತಂಡ ದಾಳಿ ನಡೆಸಿದ್ದು, ಲಂಚದ ಹಣದ ಸಮೇತ ಕೋಡ್ಲಾಪುರ ಗ್ರಾಮ ಪಂಚಾಯತಿಯ ಪಿಡಿಒ ಪಂಡಪ್ಪ ಹಾಗೂ ಬಿಲ್ ಕಲೆಕ್ಟರ್ ಹನುಮಂತರಾಯಪ್ಪನನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.