ನವದೆಹಲಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿರುವ ಸಂಗತಿ ಅದು ಅವರ ಪಾರ್ಟಿ ಮ್ಯಾಟರ್… ಅವರ ಆಂತರಿಕ ವಿಚಾರ. ಅವರೇನಾದರೂ ಮಾಡಿಕೊಳ್ಳಲಿ, ನಾನ್ಯಾಕೆ ಬಾಯಿ ಹಾಕಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರದ್ದು ನ್ಯಾಷನಲ್ ಪಾರ್ಟಿ.. ಮುತ್ತು ರತ್ನಗಳನ್ನು ಎಲ್ಲೆಲ್ಲಿ ಇಟ್ಟುಕೊಳ್ಳಬೇಕು ಅವರು ಇಟ್ಟುಕೊಳ್ಳಲಿ. ನಾನು ಆ ಬಗ್ಗೆ ಮಾತನಾಡಲ್ಲ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಆಗಿದೆಯಾ ಎಂಬ ಪ್ರಶ್ನೆಗೆ ನನಗೆ ಆ ಬಗ್ಗೆ ಗೊತ್ತಿಲ್ಲ ಎಂದ ಡಿಕೆಶಿ, ಒಳಮೀಸಲಾತಿ ವಿಚಾರ ಚರ್ಚೆ ನಡೆಯುತ್ತಿದೆ. ಸಾಧಕ-ಬಾಧಕ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಇದೇ ವೇಳೆ ಹೇಳಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿ ಚರ್ಚೆಯ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ ಭೇಟಿಯಾಗಿರಬಹುದು. ಸಂಚಲನ ಅಂತೇನಿಲ್ಲ. ಎಲ್ಲವೂ ಮಾಧ್ಯಮದವರು ವ್ಯಾಖ್ಯಾನ ಮಾಡುತ್ತಿದ್ದೀರಿ ಎಂದು ಸ್ಪಷ್ಟನೆ ನೀಡಿದರು.