ಆ್ಯಕ್ಷನ್ ಕ್ವೀನ್ ಮಾಲಾಶ್ರೀ, ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಪೆನ್ಡ್ರೈವ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಪೆನ್ಡ್ರೈವ್ ಸಿನಿಮಾದ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿ, “ಪೆನ್ಡ್ರೈವ್ ಕಾಲ್ಪನಿಕ ಕಥಾಹಂದರ ಹೊಂದಿರುವ ಚಿತ್ರ. ನಿರ್ಮಾಪಕರ ಸಹಕಾರದಿಂದ ಅಂದುಕೊಂಡ ಯೋಜನೆಯಂತೆ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಾಜ್ಯದಲ್ಲಿ ನಡೆದ ಆ ಪೆನ್ಡ್ರೈವ್ ಪ್ರಕರಣಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಈಗ ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಅನಾವರಣವಾಗಲಿದೆ” ಎಂದು ತಿಳಿಸಿದರು.

ತನಿಷಾ ಕುಪ್ಪಂಡ ಮಾತನಾಡಿ, “ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಒಂದು ಹಾಡಿನಲ್ಲೂ ಅಭಿನಯಿಸಿದ್ದೇನೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನನ್ನ ಪಾತ್ರ ವಿಭಿನ್ನವಾಗಿದೆ. ಅದು ಹೇಗಿರುತ್ತೆ ಎನ್ನುವುದನ್ನು ತೆರೆ ಮೇಲೆ ನೋಡಬೇಕು” ಎಂದರು.
ಬಿಗ್ಬಾಸ್ ಖ್ಯಾತಿಯ ಕಿಶನ್ ಮಾತನಾಡಿ, “ನಾನು ಧಾರಾವಾಹಿಯಲ್ಲಿ ನಟಿಸಿದ್ದೆ. ನನ್ನ ಅಭಿನಯದ ಮೊದಲ ಚಿತ್ರ ಪೆನ್ಡ್ರೈವ್. ಈ ಚಿತ್ರದಲ್ಲಿ ಆ್ಯಕ್ಷನ್ ಕೂಡ ಮಾಡಿದ್ದೇನೆ” ಎಂದು ಖುಷಿ ಹಂಚಿಕೊಂಡರು.
ಮಾಲಾಶ್ರೀ, ತನಿಷಾ ಕುಪ್ಪಂಡ, ಕಿಶನ್ ಅಲ್ಲದೆ ನಟಿ ಸಂಜನಾ ನಾಯ್ಡು ಮತ್ತು ನಟ ಕರಿಸುಬ್ಬು, ನಿರ್ಮಾಪಕ ಲಯನ್ಸ್ ವೆಂಕಟೇಶ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಾ.ರಾ.ಗೋವಿಂದು, ನಿರ್ಮಾಪಕರಾದ ಹನುಮಂತ ರಾಜು ಹಾಗೂ ಲಯನ್ ಎಸ್. ವೆಂಕಟೇಶ್, ಕಾರ್ಯಕಾರಿ ನಿರ್ಮಾಪಕ ಜಿ.ವೆಂಕಟೇಶ್ ಉಪಸ್ಥಿತರಿದ್ದರು.
ಆರ್.ಹೆಚ್.ಎಂಟರ್ಪ್ರೈಸಸ್ ಮತ್ತು ಶ್ರೀತಿರುಮಲ ಸಿನಿ ಎಂಟರ್ಟೈನ್ಮೆಂಟ್ ಅರ್ಪಿಸುತ್ತಿದ್ದು, ಎನ್. ಹನುಮಂತರಾಜು ಹಾಗೂ ಲಯನ್ ಎಸ್.ವೆಂಕಟೇಶ್ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾಗೇಶ್ ಅವರ ಸಹ ನಿರ್ದೇಶನ, ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಪೆನ್ಡ್ರೈವ್ ಚಿತ್ರ ತೆರೆಗೆ ಬರಲಿದೆ.ವಾಣಿಜ್ಯ ಮಂಡಳಿ ಕಾರ್ಯದರ್ಶಿ ಪ್ರವೀಣ್ ಕುಮಾರ್, ಜೆ.ವೆಂಕಟೇಶ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.




