ರಾಯಚೂರ : ಮಾ.15 (ಕ.ವಾ.): ಮಾನವಿಯ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ 15ರಂದು ನಡೆದ ಜಿಲ್ಲಾ ಮಟ್ಟದ ಆರೋಗ್ಯ ಮೇಳದಲ್ಲಿ ಅಕ್ಷರಶಃ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರು ಭಾಗಿಯಾಗಿದ್ದು ಕಂಡು ಬಂದಿತು.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾನವಿ, ನೀರಮಾನವಿ, ನಂದ್ಯಾಳ, ಸಂಗಾಪುರ, ಹರವಿ, ನಸಲಾಪುರ, ಯರಮಲದೊಡ್ಡಿ, ಗುಡದಿನ್ನಿ, ಕಡದಿನ್ನಿ, ಬಳ್ಳಟಗಿ, ಆಲದಾಳ, ಚಿಕ್ಕ ಕೊಟೆನೆಕಲ್, ಭೋಗಾವತಿ, ಕಫಗಲ್, ನಲದಗುಡ್ಡ, ನಳ್ಳಿನಮಡಗ, ಕೋಟ್ನೆಕಲ್, ಅಮರೇಶ್ವರ ಕ್ಯಾಂಪ್ ಸೇರಿದಂತೆ ಸುತ್ತಲಿನ ನಾನಾ ಗ್ರಾಮಸ್ಥರು ಬೆಳಗ್ಗೆಯಿಂದಲೇ ಮಾನವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನತ್ತ ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಬೆಳಗಿನ 10.30ರ ಸುಮಾರಿಗೆ ಕಾಲೇಜಿನ ಆವರಣದಲ್ಲಿ ಜನಸ್ತೋಮವೇ ಕಂಡು ಬಂದಿತು. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಪಾಂಡ್ವೆ ಅವರ ನಿರ್ದೇಶನದಂತೆ ಆರೋಗ್ಯ ಮೇಳವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ರಿಮ್ಸ್ ನಿರ್ದೇಶಕರಾದ ಡಾ.ರಮೇಶ, ಮಾನವಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸವರಾಜ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಾಡು ಮಾಡಲಾಗಿತ್ತು.
ಅಲ್ಲಲ್ಲಿ ಮಳಿಗೆಗಳು: ಕಾಲೇಜಿನ ಪ್ರವೇಶದ್ವಾರದ ಬಳಿಯಲ್ಲಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ವೇಳೆಗೆ ಅಂದಾಜು 6 ಸಾವಿರ ಜನರು ನೋಂದಣಿ ಮಾಡಿದ್ದರು. ಹೆಸರು ನೋಂದಾಯಿಸಿದ ನಂತರ ಚೀಟಿ ಪಡೆದ ರೋಗಿಗಳು ಬಿಪಿ, ಸುಗರ್ ತಪಾಸಣೆ ನಂತರ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಬ್ಲಾಕ್ ವಾರು ಮಳಿಗೆಗಳು: ಎ ಬ್ಲಾಕನಲ್ಲಿ ನೋಂದಣಿಗೆ, ಬಿ ಬಿ ಬ್ಲಾಕನಲ್ಲಿ ತಪಾಸಣೆಗೆ ಏರ್ಪಾಡು ಮಾಡಲಾಗಿತ್ತು.
ಸಿ ಬ್ಲಾಕನಲ್ಲಿ ವೈದ್ಯಕೀಯ ವಿಭಾಗ, ಹೃದ್ರೋಗ ತಪಾಸಣಾ ವಿಭಾಗ, ನರರೋಗ ತಜ್ಞ ವಿಭಾಗ, ಮೂತ್ರ ಪಿಂಡ ವಿಭಾಗ, ಕ್ಯಾಸ್ಟ್ರೋ ಇಂಟ್ರೋಲಾಜಿ ವಿಭಾಗ, ಅಂಕೋಲಾಜಿ, ಮಾನಸಿಕ ರೋಗ ತಜ್ಞ ವಿಭಾಗ, ಕರ್ನಾಟಕ ಮೆದುಳಿನ ಅಸರೋಗ್ಯ ಉಪಕ್ರಮ ವಿಭಾಗ, ಮಕ್ಕಳ ತಜ್ಞ ವಿಭಾಗ ಮತ್ತು ಚರ್ಮ ರೋಗ ತಜ್ಞ ವಿಭಾಗದಡಿ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.
ಅದೇ ರೀತಿ ಡಿ ಬ್ಲಾಕನಲ್ಲಿ ಶಸ್ತ್ರ ಚಿಕಿತ್ಸಾ ತಜ್ಞ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ನೇತ್ರ ತಜ್ಞ ವಿಭಾಗ, ಎಲುಬು ಕೀಲು ತಜ್ಞ ವಿಭಾಗ, ದಂತ ತಜ್ಞ ವಿಭಾಗ, ಭಾರತೀಯ ಆಯುಷ್ ವೈದ್ಯ ವಿಭಾಗ ಮತ್ತು ಯೋಗ ವಿಭಾಗಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಚಿವರಿಂದ ವೀಕ್ಷಣೆ: ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಎನ್ ಎಸ್ ಬೋಸರಾಜು, ಸಂಸದರಾದ ಕುಮಾರ ನಾಯಕ, ಶಾಸಕರಾದ ಹಂಪಯ್ಯ ನಾಯಕ ಅವರು ಬೆಳಗ್ಗೆ ಮಾನ್ವಿ ಪಟ್ಟಣಕ್ಕೆ ಆಗಮಿಸಿ ಬೃಹತ್ ಆರೋಗ್ಯ ಮೇಳದ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮದ ವೀಕ್ಷಣೆ ನಡೆಸಿದರು. ಇದೆ ವೇಳೆ ವಿವಿಧ ವಿಭಾಗಗಳ 30 ಕೌಂಟರಗಳ ವೀಕ್ಷಣೆ ನಡೆಸಿದರು.
ಊಟದ ವ್ಯವಸ್ಥೆ: ಆರೋಗ್ಯ ಮೇಳದ ಸ್ಥಳದಲ್ಲಿ ಕೌಂಟರ್ ಅಳವಡಿಸಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೋದಿ ಹುಗ್ಗಿ, ಅನ್ನ, ಸಾಂಬಾರು ನೀಡಲಾಯಿತು. ಅಲ್ಲಲ್ಲಿ ಕುಡಿಯುವ ನೀರಿನ ಟ್ಯಾಂಕರಗಳನ್ನು ನಿಲ್ಲಿಸಲಾಗಿತ್ತು.
ಎಕ್ಸರೆ, ಸ್ಕ್ಯಾನಿಂಗ್ ವ್ಯವಸ್ಥೆ: ಆಯಾ ವಿಭಾಗಗಳಲ್ಲಿ ತಪಾಸಣೆ ಬಳಿಕ ಎಕ್ಸರೆ, ಸ್ಕ್ಯಾನಿಂಗ್ ಮಾಡಿಸಲು ಸಹ ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಮೊಬೈಲ್ ವೈದ್ಯಕೀಯ ಘಟಕದ ವಾಹನಗಳನ್ನು ನಿಲ್ಲಿಸಲಾಗಿತ್ತು. ಹಲವು ಮಾಹಿತಿಯ ಆರೋಗ್ಯ ಮಳಿಗೆ: ಕಾಲೇಜಿನ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಳಿಗೆ ಅಳವಡಿಸಿ, ನಮ್ಮ ಕ್ಲಿನಿಕ್, ಸುರಕ್ಷಿತ ಮಾತೃತ್ವ ಆಶ್ವಾಸನ, ಶುಚಿ ಯೋಜನೆ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಸೇರಿದಂತೆ ನಾಮಾ ಯೋಜನೆಗಳ ಮಾಹಿತಿ ನೀಡಲಾಯಿತು.
ಅಂಗನವಾಡಿಯ ವಿಶೇಷ ಮಳಿಗೆ: ಮಾನವಿ ತಾಲೂಕಿನ 50 ಅಂಗನವಾಡಿ ಕಾರ್ಯಕರ್ತೆಯರು ಸೇರಿ ವಿಶೇಷ ಮಳಿಗೆ ಹಾಕಿದ್ದರು. ಪೌಷ್ಠಿಕ ಆಹಾರದ ವಿವರ, ಶಾಲಾ ಸಿದ್ದತೆಯ ಆಯಾಮಗಳು, ಸಂಪೂರ್ಣತಾ ಅಭಿಯಾನ ಕಾರ್ಯ, ಬೇಟಿ ಬಚಾವೋ ಬೇಟಿ ಪಡಾವೋ, ಮಿಷನ್ ವಾತ್ಸಲ್ಯ ಕಾರ್ಯಕ್ರಮಗಳ ಮಾಹಿತಿ ಫಲಕಗಳನ್ನು ಅಳವಡಿಸಿ ಮಾಹಿತಿ ನೀಡಿದರು.
ಜನತೆಗೆ ಅನುಕೂಲವಾಯ್ತು: ಮಾನ್ವಿಯಲ್ಲಿ ನಡೆದ ಆರೋಗ್ಯ ಮೇಳದಿಂದ ಮಾನವಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದ ಅಸಂಖ್ಯೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಯಿತು. ಮಾನ್ಯ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಆರೋಗ್ಯ ಸೇರಿದಂತೆ ಇನ್ನೀತರ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಹೇಳುತ್ತೇವೆ ಎಂದು ಭೋಗಾವತಿ ಪಂಚಾಯಿತಿಯ ಎನ್ ಆರ್ ಎಲ್‌ಎಂನ ಶಿವಲೀಲಾ ಮತ್ತು ಎಲ್ ಸಿಆರ್ ಪಿ ಭೂಮಿಕಾ ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಮತ್ತು ರಾಯಚೂರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಘ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.