ಗುರುಮಠಕಲ್: ಹಿರಿಯ ರಾಜಕೀಯ ಧುರೀಣ ಮತ್ತು ಮಾಜಿ ಶಾಸಕ ಲಿಂ.ನಾಗನಗೌಡ ಕಂದಕೂರ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಗುರಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಅವರ ತೋಟದಲ್ಲಿ ಬುಧವಾರ ಜರುಗಿತು.
ತೋಟದಲ್ಲಿನ ಕಂದಕೂರ ಅವರ ಸ್ಮಾರಕವನದನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಕಂದಕೂರ ಪರಿವಾರ ಸಮಾದಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಹೊತ್ತು ಏರುತ್ತಲೇ ಕಂದಕೂರ ಗ್ರಾಮಕ್ಕೆ ಯಾದಗಿರಿ ಸೇರಿದಂತೆ ನೆರೆಯ ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳಿಂದ ನಾಗನಗೌಡ ಕಂದಕೂರ ಅವರ ಒಡನಾಡಿಗಳು ಮತ್ತು ಗುರಮಠಕಲ್ ಕ್ಷೇತ್ರದಿಂದ ಸಾವಿರಾರು ಜನರು ಸಾಗರೋಪಾದಿಯಲ್ಲಿ ಆಗಮಿಸಿ, ಕಂದಕೂರ ಅವರ ಸಮಾದಿಗೆ ಪುಷ್ಪ ನಮನ ಸಲ್ಲಿಸಿದರು.

ಜನರನ್ನು ನಿಯಂತ್ರಿಸಲು ಸ್ವಯಂಸೇವಕರು ಕೆಲಕಾಲ ಪರದಾಡುವಂತಾಯಿತು. ಅಪಾರ ಪ್ರಮಾಣದಲ್ಲಿ ತಾಯಂದಿರು ಸಹ ಆಗಮಿಸಿದ್ದರು. ಜಿಲ್ಲೆಯ ವಿವಿಧ ಮಠಾಧೀಶರು ಕಂದಕೂರ ಸಮಾದಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾಗನಗೌಡರು ತಮ್ಮ ಜೀವಿತಾವಧಿಯಲ್ಲಿ ಜನರನ್ನು ಎಷ್ಟರ ಮಟ್ಟಿಗೆ ಪ್ರೀತಿಸಿದ್ದರು ಎಂಬುದಕ್ಕೆ ಪುಣ್ಯಸ್ಮರಣೆಗೆ ಸ್ವಯಂ ಪ್ರೇರಣೆಯಿಂದ ಬಂದ ಜನತೆ ಸಾಕ್ಷೀಕರಿಸಿತ್ತು. ಅಧಿಕಾರ ಇರಲಿ, ಇಲ್ಲದಿರಲಿ ತನ್ನ ಬಳಿ ಬಂದ ಜನರನ್ನು ಅತ್ಯಂತ ಆದರದಿಂದ ಕಂಡು ಕಪ್ ಚಹಾ ಕುಡಿಸಿಯೇ ಕಳಿಸುತ್ತಿದ್ದ ನಾಗನಗೌಡರು ಇಂದಿಗೂ ಗುರಮಠಕಲ್ ಕ್ಷೇತ್ರದ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ನೆಲೆಯೂರಿದ್ದಾರೆ ಎಂದು ಅವರ ಅಭಿಮಾನಿಗಳು ಸ್ಮರಿಸಿಕೊಂಡರು.

ಪ್ರಮುಖರಾದ ಸಿದ್ರಾಮಪ್ಪಗೌಡ ಯಕ್ಷಂತಿ, ಗೌಡಪ್ಪಗೌಡ ಮದರ್ಕಲ್, ಶ್ರೀನಿವಾಸರೆಡ್ಡಿ ಕಂದಕೂರ್, ಡಾ.ಅಶೋಕೆರೆಡ್ಡಿ ವಡವಟ್, ರಾಜೇಂದ್ರರೆಡ್ಡಿ ಹಂಚಿನಾಳ, ಮಲ್ಲಿಕಾರ್ಜುರೆಡ್ಡಿ, ಕಂದಕೂರ್, ಶಾಸಕ ಶರಣಗೌಡ ಕಂದಕೂರ್,ಮಹೇಂದ್ರರೆಡ್ಡಿ ಕಂದಕೂರ್, ವೆಂಕಟರೆಡ್ಡಿ ಯಕ್ಷಂತಿ, ಸುಜೀವ್ ಪಾಟೀಲ್ ಮಾನ್ವಿ ರಾಕೇಶರೆಡ್ಡಿ ಯಕ್ಷಂತಿ, ಲಿಂಗಣ್ಣಗೌಡ ಕೊಡಮ್ನಳ್ಳಿ
ಡಾ.ಅಶೋಕರಡ್ಡಿ ಅಮೀನಗಡ ಹಾಗೂ ಕಂದಕೂರ ಪರಿವಾರ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಇದ್ದರು.

ಬಾಳೆ ಎಲೆಯಲ್ಲಿ ಪ್ರಸಾದದ ವ್ಯವಸ್ಥೆ
ಆತಿಥ್ಯದ ವಿಷಯದಲ್ಲಿ ಕಂದಕೂರ ಪರಿವಾರ ಮೊದಲಿಂದಲೂ ಎತ್ತಿದ ಕೈ. ಯಾವುದೇ ಕಾರ್ಯಕವಾದರೂ ಊಟದ ವಿಷಯದಲ್ಲಿ ಅಚ್ಚುಕಟ್ಟು ಮತ್ತು ಶಿಸ್ತನ್ನು ಎಂದಿಗೂ ಮರೆತಿಲ್ಲ. ಅದರಂತೆಯೇ
ಪುಣ್ಯಸ್ಮರಣೆಗೆ ಆಗಮಿಸಿದ್ದ ಸುಮಾರು 6 ರಿಂದ 7 ಸಾವಿರ ಜನತೆಗೆ ಟೇಬಲ್ ಮೇಲೆ ಕೂಡಿಸಿ ಬಾಳೆ ಎಳೆಯಲ್ಲಿ ಭೋಜನ ನೀಡಲಾಯಿತು. ಬಿಸಿಬಿಸಿ ಹೋಳಿಗೆ, ಗುಲಾಮ್ ಜಾಮೂನು, ಮಿರ್ಚಿ ಬಜ್ಜಿ, ಪೂರಿ, ಕೆಂಪು ಚಟ್ನಿ, ಮಸಾಲ್ ರೈಸ್ ಮತ್ತು ರೈತಾವನ್ನು ಜನತೆ ಸವಿದರು.
ಮೂರು ಎಕರೆ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲ ಮೇಲುಸ್ತುವಾರಿಯನ್ನು ಮಲ್ಲಿಕಾರ್ಜುನರಡ್ಡಿ ಕದಕೂರ ಮತ್ತು ಶಾಸಕ ಶರಣಗೌಡ ಕಂದಕೂರ ಖುದ್ದಾಗಿ ಮುಂದೆ ನಿಂತು ನೋಡಿಕೊಂಡರು.
ವರದಿ : ರವಿ ಬುರನೋಳ್




