ನೈಪಿಡಾವ್ (ಮ್ಯಾನ್ಮಾರ್): ಶುಕ್ರವಾರ ಮಧ್ಯಾಹ್ನ 12.50ಕ್ಕೆ (ಸ್ಥಳೀಯ ಸಮಯ) ಮಧ್ಯ ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರ ನಂತರ 6.8 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಸಗೈಂಗ್ ನಗರದ ವಾಯುವ್ಯಕ್ಕೆ 16 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಮತ್ತು ಅಕ್ಷಾಂಶ 21.93 ಉತ್ತರ ಮತ್ತು ರೇಖಾಂಶ 96.07ರಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಭೂಕಂಪದಿಂದ ಈವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಪ್ರಸ್ತುತ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಆದರೆ, ಭೂಕಂಪದ ನಂತರ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಗಗನ ಚುಂಬಿ ಕಟ್ಟಡಗಳು, ಮನೆಗಳು ನೆಲೆಕ್ಕುರುಳಿದ್ದು, ಭೀತಿಗೊಂಡ ಜನರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿವೆ. ಬೃಹತ್ ಕಟ್ಟವೊಂದು ಏಕಾಏಕಿ ನೆಲಕ್ಕುರುಳಿ ಬಿದ್ದಿದ್ದು, ಈ ದೃಶ್ಯ ಕೂಡ ಸೆರೆಯಾಗಿದೆ. ಬಹುಮಹಡಿ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಈಜುಕೊಳದಿಂದ ನೀರು ಕೆಳಕ್ಕೆ ಬೀಳುತ್ತಿರುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರ ಥೈಲ್ಯಾಂಡ್, ಬ್ಯಾಂಗ್ಕಾಕ್, ಚೀನಾದ ಯುನಾನ್ ಪ್ರಾಂತ್ಯಗಳಲ್ಲಿಯೂ ಕಂಪನದ ಅನುಭವವಾಗಿದೆ. ಯುನಾನ್ನಲ್ಲಿ ಭೂಕಂಪವು 7.9ರಷ್ಟು ತೀವ್ರತೆಯನ್ನು ಹೊಂದಿತ್ತು ಎಂದು ಚೀನಾ ಹೇಳಿದೆ. ಪರಿಸ್ಥಿತಿಯನ್ನು ಅವಲೋಕಿಸಲು ಥಾಯ್ ಪ್ರಧಾನಿ ಪೆಟೊಂಗ್ ಟಾರ್ನ್ ಶಿನವಾತ್ರಾ ತುರ್ತು ಸಭೆ ನಡೆಸುತ್ತಿದ್ದಾರೆ.