ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಾನು ಯಾವತ್ತೂ ಬೈದಿಲ್ಲ. ನಾನು ಅವರನ್ನು ಪ್ರಶ್ನಿಸಿರುವುದನ್ನೇ ಬೈದಿದ್ದೇನೆ ಎಂದು ಭಾವಿಸಿ ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೆಲ ಬಿಜೆಪಿ ನಾಯಕರು ನನ್ನ ಮೇಲೆ ಹರಿಹಾಯುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಮೇ 28ರ ಬುಧವಾರ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನೆರೆ ಹಾವಳಿ ಪೀಡಿತ ಪ್ರದೇಶ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ಪ್ರಶ್ನೆ ಮಾಡಿದರೆ ಸಾಕು, ನನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಾಗಿ ಬಿಜೆಪಿ ನಾಯಕರು ಮಾತನಾಡುತ್ತಾರೆ. ಬಿಜೆಪಿಯವರಿಗೆ ಪ್ರಶ್ನೆ ಕೇಳಬಾರದು. ಕೇಳಿದವರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಾರೆ ಎಂದು ಕಿಡಿಕಾರಿದರು.
ದೇಶದಲ್ಲಿ ಪ್ರಧಾನಿ ಮೋದಿ ಅವರನ್ನು ದೇವಮಾನವನ್ನಾಗಿಮಾಡಿದ್ದಾರೆ. ಅವರನ್ನು ಪ್ರಶ್ನಿಸಿದರೆ ಕೆಲ ಬಿಜೆಪಿ ನಾಯಕರು ನಮ್ಮ ವಿರುದ್ಧ ಹರಿಹಾಯುತ್ತಾರೆ. ಅದೇ ಬಿಜೆಪಿ ನಾಯಕರು ಬೇರೆ ಪಕ್ಷದ ನಾಯಕರಿಗೆ ಏಕವಚನ ಬಳಕೆ ಮಾಡಿ ಮಾತನಾಡಬಹುದು. ಅದೇ ದೇಶದ ಅಭಿವೃದ್ಧಿ ಬಗ್ಗೆ, ಇವರು ಮಾತನಾಡುವುದಿಲ್ಲ ಎಂದು ಕುಟುಕಿದರು.
ಭಾರತ ಜಿಡಿಪಿಯಲ್ಲಿ 4ನೇ ಸ್ನಾನಕ್ಕೇರಿದೆ. ಆದರೆ ತಲಾ ಆದಾಯದಲ್ಲಿ 146ನೇ ಸ್ಥಾನದಲ್ಲಿದೆ. ಇತ್ತೀಚೆಗೆ ವ್ಯಾಪಂ ಪ್ರಕರಣದಲ್ಲಿ 44 ಜನರ ಕೊಲೆಯಾಗಿದೆ. ಈ ವಿಚಾರದ ಬಗ್ಗೆಯಾಗಲಿ, ಬಿಎಸ್‌ಎನ್‌ಎಲ್ ಅನುಭವಿಸುತ್ತಿರುವ ನಮ್ಮದ ಬಗ್ಗೆ ಚರ್ಚಿಸಲ್ಲ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಎಂದು ಹೇಳುವ ಬಿಜೆಪಿ ನಾಯಕರು ಒಂದೇ ಒಂದು ಹೇರ್ ಪಿನ್, ಬಾಚಣಿಕೆ ತಯಾರಿಸಿಲ್ಲ ಎಂದು ಹರಿಹಾಯ್ದರು. ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ ಎಂಬ ಕಮಲಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಕನ್ನಡ ಭಾಷೆಗೆ ಧಕ್ಕೆ ತರುವ ಮಾತನ್ನು ನಾವು ಒಪ್ಪಲ್ಲ. ಅವರವರ ಅಭಿಪ್ರಾಯ ಅವರು ಹೇಳುತ್ತಾರೆ. ನಾವು ಕರ್ನಾಟಕದವರು, ನಾವು ಕನ್ನಡಿಗರು. ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನವಿದೆ. ಇಂತಹ ಮಾತನ್ನು ನಾನು ಖಂಡಿಸುತ್ತೇನೆ ಎಂದರು.




