ಸಿರುಗುಪ್ಪ : -ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಇ.ಸಿ.ಸಿ.ಇ ಶಿಕ್ಷಣವನ್ನು ಪ್ರಾರಂಭಿಸಲು ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ತಾಲೂಕು ಸಮಿತಿಯಿಂದ ಹೋರಾಟ ನಡೆಸಲಾಯಿತು. ನಗರದಲ್ಲಿನ ಮನವಿ ಸಲ್ಲಿಸಲು ಶಾಸಕರ ನಿವಾಸಕ್ಕೆ ಹೊರಟಾಗ ಪೋಲೀಸ್ ಇಲಾಖೆಯಿಂದ ತಡೆಯಲಾಯಿತು.
ಮುಂಜಾಗ್ರತೆಯಾಗಿ ಬ್ಯಾರಿಕೇಡ್ ಅಳವಡಿಸಿ ಶಾಸಕರ ನಿವಾಸಕ್ಕೆ ಬಿಗಿಭದ್ರತೆ ಒದಗಿಸಲಾಗಿತ್ತು.ಪ್ರತಿಭಟನೆ ನಡೆಸುತ್ತಿದ್ದ ನಗರದ ಪ್ರವಾಸಿ ಮಂದಿರದ ಆವರಣಕ್ಕೆ ಅವರು ಆಗಮಿಸಿದ ಶಾಸಕ ಬಿ.ಎಮ್.ನಾಗರಾಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ತಾಲೂಕು ಸಮಿತಿ ಅಧ್ಯಕ್ಷೆ ಉಮಾದೇವಿ ಮಾತನಾಡಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 8ಜಿಲ್ಲೆಗಳಲ್ಲಿನ 39 ತಾಲೂಕುಗಳಲ್ಲಿ 1179 ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಇ.ಸಿ.ಸಿ.ಇ ಶಿಕ್ಷಣವನ್ನು ಪ್ರಾರಂಭಿಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಈಗಿರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಸರಿದೂಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇನ್ನು ಆರಂಭಿಕ ಬಾಲ್ಯದ ಚಿಣ್ಣರಿಗೆ ಶಿಕ್ಷಣವನ್ನು ಶಾಲೆಯಲ್ಲೇ ನೀಡಿದಲ್ಲಿ ನಮ್ಮ ಅಂಗನವಾಡಿಗಳಿಗೆ ಮಕ್ಕಳು ಬರುವುದಿಲ್ಲ.ಅದಕ್ಕಾಗಿ ರಾಜ್ಯದ ಶಿಕ್ಷಣ ನೀತಿಯನ್ನು ರೂಪಿಸಲು ಪ್ರತ್ಯೇಕ ಆಯೋಗವನ್ನು ಮಾಡಿದೆ. ಆಯೋಗದಿಂದ ವರದಿ ಬರುವ ಮುನ್ನವೇ ಏಕಾಏಕಿಯಾಗಿ ಆದೇಶ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಎಲ್ಲಾ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರಲ್ಲದೇ ಆದೇಶ ರದ್ದಾಗುವ ತನಕ ಹೋರಾಟ ನಿಲ್ಲುವುದಿಲ್ಲವೆಂದರು.
ಶಾಸಕರು ಮಾತನಾಡಿ ಜನಪ್ರತಿನಿಧಿಯಾಗಿ ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡುತ್ತೇನೆ. ಸರ್ಕಾರದಲ್ಲಿ ಉಂಟಾಗುವ ಲೋಪದೋಷಗಳ ವಿರುದ್ದ ಪ್ರತಿಭಟನೆ ಮಾಡುವುದು ನಿಮ್ಮ ಹಕ್ಕು. ಕಾನೂನಿನಡಿಯಲ್ಲಿ ಪ್ರತಿಭಟನೆ ಮಾಡುವಂತೆ ಸೂಚಿಸಿದರು.ಇದೇ ವೇಳೆ ತಹಶೀಲ್ದಾರ್. ಹೆಚ್.ವಿಶ್ವನಾಥ, ಸಿ.ಡಿ.ಪಿ.ಓ ಪ್ರದೀಪ್‌ಕುಮಾರ್, ಸಿ.ಪಿ.ಐ ಹನುಮಂತಪ್ಪ, ಸಂಘಟನೆಯ ಪದಾಧಿಕಾರಿಗಳಾದ ಶಕುಂತಲಮ್ಮ, ಎಮ್.ಖಾಜಾಬಿ, ಹೇಮಾವತಿ, ನೀಲಾವತಿ ಹಾಗೂ ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.
ವರದಿ:-ಶ್ರೀನಿವಾಸ ನಾಯ್ಕ