ಐಪಿಎಲ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
ಟೈಟನ್ಸ್ಗೆ ಅಗ್ರ ಸ್ಥಾನ: ಈ ಋತುವಿನಲ್ಲಿ ಈ ವರೆಗೂ ಆಡಿರುವ ಐದು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡ 4 ರಲ್ಲಿ ಗೆಲುವು ಸಾಧಿಸಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. ಜೊತೆಗೆ ಪಾಯಿಂಟ್ಸ್ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ. ಇಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕದನಕ್ಕಿಳಿಯಲಿದೆ. ಇದರ ನಡುವೆಯೆ ಗುಜರಾತ್ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಆಗಿರುವ ಗ್ಲೆನ್ ಫೀಲಿಪ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಯಾವುದೇ ಸ್ಪಷ್ಟನೆ ಇಲ್ಲ: ತಂಡದಿಂದ ಫಿಲಿಪ್ಸ್ ಹಠಾತ್ ನಿರ್ಗಮನದ ಬಗ್ಗೆ ಫ್ರಾಂಚೈಸಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಫಿಲಿಪ್ಸ್ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಏಪ್ರಿಲ್ 6ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದ ವೇಳೆ ಸಬ್ಸ್ಟಿಟ್ಯೂಟ್ ಆಟಗಾರನಾಗಿ ಫೀಲ್ಡಿಂಗ್ಗೆ ಬಂದಿದ್ದ ಫೀಲಿಪ್ಸ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಇದೀಗ ನೋವು ತೀವ್ರಗೊಂಡಿರುವ ಕಾರಣ ಮನೆಗೆ ವಾಪಸ್ ಆಗಿದ್ದಾರೆ.
ಅತ್ಯುತ್ತಮ ಆಲ್ರೌಂಡರ್; 28 ವರ್ಷದ ಈ ಆಲ್‌ರೌಂಡರ್ ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಈ ಆಟಗಾರ ಕೆಲ ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆದು ಎಲ್ಲರಿಗೂ ಆಶ್ವರ್ಯ ಪಡಿಸಿದ್ದರು.