“ಹಿತ್ತಲ ಗಿಡ ಮದ್ದಲ್ಲ ” ಅಂಬೋ ಗಾದೆ ಮಾತು ಕೇಳಿರ್ತೀವಿ. ಆದರೆ ಹಿತ್ತಲ್ಲಲ್ಲಿ ಇರುವ ಇತಿಹಾಸವನ್ನು ನಾವೆಲ್ಲರೂ ಉಳಿಸಿ ಕೊಳ್ಳಬೇಳಲ್ಲವೇ?
ಮುದಗಲ್ಲ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿತ್ತಲ್ಲಲ್ಲೂ ಇತಿಹಾಸವಿದೆ. ವಿಜಯನಗರ ಆಳ್ವಿಕೆಯಲ್ಲಿ ಸುವರ್ಣವನ್ನು ಅಳತೆ ಮಾಡಿ ತೂಗಿದ ಸಾಮ್ರಾಜ್ಯವದು. ಅಷ್ಟೇ ಅಲ್ಲ ಆ ಭಾಗಗಳಲ್ಲಿ ಶಿಲಾಯುಗದ ನೆಲೆಗಳಿಂದ ಹಿಡಿದು ಮಧ್ಯ ಯುಗದಲ್ಲಿ ಆಳಿದ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಕುರುಹುಗಳು ಸೇರಿ, ವಚನ ಸಾಹಿತ್ಯ, ದಾಸ ಸಾಹಿತ್ಯದ ಅಂಶಗಳು, ಶತಮಾನ ಕಂಡ ಅದಿರಿನ ಗಣಿಗಳು, ವೇಷ, ಭಾಷೆ, ಸಂಸ್ಕೃತಿ, ಆಚರಣೆಗಳು ಎಲ್ಲದರಲ್ಲೂ ವಿಶೇಷವೇ ಎಂದು ಹೇಳಬಹುದು.
ಭೂ ವಿಕಸನದ ನಂತರ ಸೂಕ್ಷ್ಮ ಜೀವಿಗಳ, ಸರಿಸೃಪಗಳ, ಧೈತ್ಯಾಕಾರದ ಪ್ರಾಣಿಗಳ, ಉಗಮದ ನಂತರ ಆದಿಮಾನವನ ಜನನವಾಯಿತು. ಊಟ ಮೈಥುನಕ್ರಿಯೆ, ನಿದ್ದೆಗಷ್ಟೇ ಸೀಮಿತವಾಗಿದ್ದ ಮಾನವ ತನ್ನದೇಯಾದ ಆ ದಿನಗಳಲ್ಲಿ ವಿಶಿಷ್ಟ ಆಹಾರ, ಜೀವನಶೈಲಿ ಇತ್ಯಾದಿಗಳಿಂದ ರಾಜನಂತೆಯೇ ಇದ್ದ. ಕ್ರಿ ಪೂ 2700 ವರ್ಷಗಳ ಹಿಂದಿನ ಪೂರ್ವ ಅವಧಿಯಲ್ಲಿ ನವ ಶಿಲಾಯುಗದಲ್ಲಿ ಮಾನವನಿಗೆ ಕೃಷಿ ಪರಿಚಯವಾಯಿತು. ಪ್ರಾಣಿಗಳನ್ನು ಪಳಗಿಸುವ ಕಲೆ ಕರಗತ ಮಾಡಿ ಕೊಂಡ, ಸೂಕ್ತ ಸ್ಥಳದಲ್ಲಿ ನೆಲೆ ನಿಂತ.
ಇದನ್ನು ಇತಿಹಾಸಕಾರರು “ನವಶಿಲಾಯುಗ” ಎಂದು ಕರೆದರು.
ನಮ್ಮ ಕರ್ನಾಟಕದಲ್ಲಿ ನವಶಿಲಾಯುಗದ ಅನೇಕ ನೆಲಗಳಿವೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಹೋಬಳಿಯಿಂದ ಆರು ಕಿಲೋ ಮೀಟರ್ ಅಂತರದಲ್ಲಿರುವ ಪಿಕಳಿಹಾಳ ಎನ್ನುವ ಇಂದಿನ ಪುಟ್ಟ ಗ್ರಾಮ ನವಶಿಲಾಯುಗದಲ್ಲಿ ಅಂದಿನ ಆದಿಮಾನವನ ಪ್ರಮುಖ ನೆಲೆಯಾಗಿತ್ತು ಎಂಬುದಕ್ಕೆ ಅಲ್ಲಿ ಇಂದಿಗೂ ಅನೇಕ ಕುರುಹುಗಳು ಸಾಕ್ಷಿಯಾಗಿವೆ. ಯಾರೋ ಚಂದಾಗಿ ಜೋಡಿಸಿಟ್ಟಂತೆ ಬೃಹದಕಾರದ ಬಂಡೆಗಳನ್ನು ಹೊಂದಿದ ಏಳು ಬೃಹತ ಬೆಟ್ಟಗಳ ಮಧ್ಯೆ ನವಶಿಲಾಯುಗಕ್ಕೆ ಸಾಕ್ಷಿಯಾಗಿ ಉರುಮಂಜಿ ವರ್ಣಚಿತ್ರಗಳು, ಕುಟ್ಟು ಚಿತ್ರಗಳು, ಗೀರು ಚಿತ್ರಗಳು, ಕಲ್ಗುಳಿಗಳು, ಕಲ್ಲುಗಳಿಂದ ಮಾಡಿದ ಪಾತ್ರೆಗಳು, ಉಪಕರಣಗಳು, ಆದಿ ಮಾನವನ ಅಸ್ಥಿಪಂಜರದ ಚೂರುಗಳು, ಅವನು ಉಪಯೋಗಿಸಿದ ಬೆಂಕಿಯ ಬೂದಿ, ಆದಿಮಾನವನ ಮುಂದುವರೆದ ಸಂತತಿಯಲ್ಲಿ ಕಟ್ಟಿಕೊಂಡ ಸಣ್ಣ ಗೂಡಿನಂತಹ ಮನೆಯ ತಳಪಾಯದ ಅವಶೇಷಗಳು ಹೀಗೆ ಹತ್ತು ಹಲವಾರು ಇಂದಿಗೂ ಸಿಗುತ್ತವೆ.
1952ರಲ್ಲಿ ಕೆಂಬ್ರಿಡ್ಜ್ ವಿಶ್ವ ವಿದ್ಯಾಲಯದ ಡಾ. ಎಫ್ ಆರ್ ಆಲ್ಚಿನ್ ಅವರು ತನ್ನ ಪತ್ನಿಯೊಂದಿಗೆ ಪಿಕಳಿಹಾಳ ನೆಲೆಯನ್ನು ಶೋಧಿಸುತ್ತಾರೆ . ನಂತರ ಸುಧೀರ್ಘ ಶೋಧನೆ,ಅಧ್ಯಯನದ ನಂತರ 1960ರಲ್ಲಿ ಅಂದಿನ ಆಂಧ್ರ ಸರ್ಕಾರ “PIKLIHAL EXCAVATIONS ” ಎಂಬ ಕೃತಿಯನ್ನು ಹೋರತರುತ್ತದೆ. ಅಲ್ಲಿಗೆ ಪಿಕಳಿಹಾಳ ಎಂಬ ಪುಟ್ಟ ಹಳ್ಳಿ ಜಾಗತಿಕ ಪ್ರಸಿದ್ಧಿಗೆ ಭಾಜನ ವಾಗುತ್ತದೆ. ಜಗತ್ತಿನ ನವ ಶಿಲಾಯುಗದ ನೆಲೆಗಳಲ್ಲಿ ಒಂದಾಗಿ ಪ್ರಾಮುಖ್ಯತೆ ಪಡೆಯುತ್ತದೆ.
ನಾವು ಈ ಇಡೀ ನಿವೇಶನ ನೋಡಿದಾಗ ನಮ್ಮ ಕಣ್ಣಿಗೆ ಪದೇ ಪದೇ ಬೀಳುವುದು ಮಳೆ ಮತ್ತು ಬಿಸಿಲಿನ ಹೊಡೆತಕ್ಕೆ ಮಾಸಿದ ಗೀರು ಚಿತ್ರಗಳು, ಅನಾದಿ ಕಾಲದಲ್ಲಿ ಮಾನವ ಆಹಾರಕ್ಕಾಗಿ ಅವಲಂಬಿಸಿರುವುದು ಜಿಂಕೆ(ಚಿಗರೆ )ಯನ್ನು, ಅದಕ್ಕೇಯೇನೋ ಅಲ್ಲಿ ಜಿಂಕೆಯ ಚಿತ್ರಗಳು ಗರಿಷ್ಟವಾಗಿ ದೊರೆಯುತ್ತವೆ.
ಇದು ತನ್ನ ಮುಂದಿನ ಪೀಳಿಗೆಗೆ ಭೇಟೆ ಅಭ್ಯಾಸ ಮಾಡಿಸಲೂ ಇರಬಹುದು ಇಲ್ಲವೇ ತನ್ನ ಒಡನಾಡಿಯಾದ ಜಿಂಕೆಯ ಮೇಲಿನ ಪ್ರೇಮದಿಂದಲೂ ಇರಬಹುದು. ಅದೇ ತೆರನಾಗಿ ಎತ್ತುಗಳ ಚಿತ್ತಾರವು ಕೂಡ ಸಿಗುತ್ತವೆ. ಒಂದು ಬಂಡೆಯ ಮೇಲೆ ಕಲ್ಗುಳಿ ಸಿಗುತ್ತದೆ. ಇದು ವೃತ್ತಾಕಾರದಲ್ಲಿದ್ದು ಮಧ್ಯಬಾಗದಲ್ಲಿ “+” ಚಿಹ್ನೆಯಿದೆ. ಆ ಮಾನವ ತನ್ನ ಮನರಂಜನೆಗೆ ಅಥವಾ ಇತರೆ ತನ್ನ ಕಾರ್ಯಕ್ಕೆ ಕುಟ್ಟಿರಬಹುದು ಎನಿಸುತ್ತದೆ. ಹಲವು ಕಡೆ ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳನ್ನು ಅರೆದು ಜಿಂಕೆಯ ಉರುಮಂಜಿ ವರ್ಣಚಿತ್ರಗಳನ್ನು ಬಿಡಿಸಲಾಗಿದ್ದು, ಕಾಲನ ಹೊಡೆತಕ್ಕೆ ಬಣ್ಣ ಮಾಸಿದಂತಾಗಿದೆ. ಇದೇ ಬಣ್ಣದಿಂದ ಕೂಡಿದ ಒಂದು ಬಂಡೆಯ ಮೇಲೆ ಸೀರೆಯ ಸೆರಗಿನಂತೆ ಕಾಣುವ ಒಂದು ಪೃಕೃತಿರಚಿತ ಚಿತ್ರವಿದ್ದು ಅದು ವನವಾಸದ ಸಮಯದಲ್ಲಿ ಸೀತಾ ಮಾತೆ ತೊಟ್ಟ ಸೀರೆಯ ಬಣ್ಣದಿಂದ ಉಳಿದ ಚಿತ್ರವೆಂದು ಅದಕ್ಕೆ “ಸೀತೆ ಸೆರಗು ” ಎಂಬುದು ಅಲ್ಲಿನ ವಾಸಿಗಳ ನಂಬಿಕೆಯಾಗಿದೆ.
ಇಡೀ ಬೆಟ್ಟವನ್ನು ಅವಲೋಕಿಸಿದಾಗ ಪೊಟರೆಗಳು ಸಿಗುವುದು ಸಾಮಾನ್ಯ, ಹೀಗಾಗಿ ಆದಿ ಮಾನವನಿಗೆ ವಾಸಕ್ಕೆ ಪ್ರಶಸ್ತ ಸ್ಥಳವಾಗಿ ಇಲ್ಲಿಯೇ ಉಳಿದು ಕೊಂಡಿರಬೇಕು ಎಂಬುದು ದೃಢವಾಗುತ್ತದೆ. ಈ ಆದಿಮಾನವನ ಬೆನ್ನತ್ತಿ ಸಂಶೋಧನೆಗೆ ವಿದೇಶಗಳಲ್ಲಿರುವ ಇತಿಹಾಸ ವಿಧ್ಯಾರ್ಥಿಗಳು, ಸಂಶೋಧಕರು ಇಲ್ಲಿ ಭೇಟಿ ನೀಡಿ ಸಿಗುವ ಅವಶೇಷಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದು ಸ್ಥಳೀಯ ದನಗಾಹಿಗಳ ಹೇಳಿಕೆ.
ದುರಂತವೆಂದರೆ ಇದೇ ನೆಲದ ಸ್ಥಳೀಯರು, ನಿಧಿಗಳ್ಳರು ಪಿಕಳಿಹಾಳ ನೆಲೆಯಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಿದ್ದಾರೆ. ವಿಪರ್ಯಾಸ ಎಂದರೆ ನವ ಶಿಲಾಯುಗದಲ್ಲಿ ಇನ್ನೂ ಚಿನ್ನದ ಬಳಕೆಯೇ ಇರಲಿಲ್ಲ. ಆದರೆ ಚಿನ್ನದಾಸೆಗಾಗಿ ಬಂಗಾರದಂತಹ ಕುರುಹುಗಳನ್ನು ನಾಶ ಮಾಡುತ್ತಿದ್ದಾರೆ.
ಈ ನವ ಶಿಲಾಯುಗದ ನೆಲೆಯ ಮೇಲೆ ಇನ್ನಷ್ಟು ಅಧ್ಯಯನ ಅವಶ್ಯಕತೆಯಿದೆ, ಅದರ ಸಂರಕ್ಷಣೆಗೆ ಯಾರೂ ಕೂಡ ಮನಸ್ಸು ಮಾಡುತ್ತಿಲ್ಲ. ಪ್ರಾಚ್ಯ ಸ್ಮಾರಕಗಳನ್ನು ಸಂರಕ್ಷಿಸಬೇಕಾದ ಸರ್ಕಾರ ಜಾಣ ಕುರುಡಾಗಿದೆ. ಆ ಇಡೀ ನಿವೇಶನ ಮುಳ್ಳು ಕಂಟಿಗಳಿಂದ ಹಿಡಿದು ತರಹೇವಾರಿ ಮರಗಳಿಂದ ತುಂಬಿದೆ, ಚಿರತೆ,ಕರಡಿ ಆಗಾಗ ಪ್ರತ್ಯಕ್ಷವಾಗಿರುವುದು ಸುದ್ದಿಯಲ್ಲಿ ಬರುತ್ತದೆ. ಅನಾಥವಾಗಿ ನಿಂತಿರುವ ಬೆಟ್ಟಗಳ ಸಮೂಹ ನವಿಲುಗಳ ನರ್ತನಕ್ಕೆ ಪ್ರೇಕ್ಷಕರಾಗಿದೆ.
ವರದಿ: ಮಂಜುನಾಥ ಕುಂಬಾರ