ಹೈದರಾಬಾದ್ (ತೆಲಂಗಾಣ) : ಗಚ್ಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಬೃಹತ್ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದ ಪತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ವಿಕಾರಾಬಾದ್‌ನ ಎಂ ಡಿ ಬಸ್ರತ್ (32) ಬಂಧಿತ ಆರೋಪಿ. ಪಶ್ಚಿಮ ಬಂಗಾಳದ ಶಬಾನಾ ಪರ್ವೀನ್ (22) ಹಲ್ಲೆಗೊಳಗಾದ ಗರ್ಭಿಣಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಪತಿ ಮನಬಂದಂತೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಈ ಹಲ್ಲೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ಶಬಾನಾ ಪರ್ವೀನ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಸ್ರತ್ನನ್ನು ಬಂಧಿಸಿ ರಿಮಾಂಡ್ಗೆ ಕಳುಹಿಸಿರುವುದಾಗಿ ಗಚ್ಚಿಬೌಲಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.
10ಕ್ಕೂ ಹೆಚ್ಚು ಬಾರಿ ಇಟ್ಟಿಗೆಯಿಂದ ಹಲ್ಲೆ: ಶಬಾನಾ ಪರ್ವೀನ್ ಎರಡು ತಿಂಗಳ ಗರ್ಭಿಣಿ ಇದ್ದು, ಮಾ.29ರಂದು ವಾಂತಿ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಏ.1ರ ರಾತ್ರಿ ಡಿಸ್ಚಾರ್ಜ್ ಆಗಿದ್ದರು. ಆಸ್ಪತ್ರೆಯಿಂದ ಹೊರಬಂದ ಶಬಾನಾ, ನೇರವಾಗಿ ಪತಿ ಬಸ್ರತ್ನ ಬಳಿಗೆ ಬಂದಿದ್ದಾಳೆ. ಆದರೆ, ಮಾತುಕತೆ ವೇಳೆ ಶಬಾನಾ ಮೇಲೆ ಏಕಾಏಕಿ ಹಲ್ಲೆಗೆ ಮುಂದಾದ ಬಸ್ರತ್, ಒಮ್ಮೆಲೇ ಓಡಿ ಬಂದು ಆಕೆಯನ್ನು ಒದ್ದಿದ್ದಾನೆ. ಈ ವೇಳೆ ಕೆಳೆಗೆ ಬಿದ್ದ ಪತ್ನಿ ಶಬಾನಾ ಮೇಲೆ ಅಲ್ಲಿದ್ದ ಬೃಹತ್ ಸಿಮೆಂಟ್ ಇಟ್ಟಿಗೆಯಿಂದ ಹತ್ತಾರು ಬಾರಿ ಜಜ್ಜಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಬಾನಾ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನಳಾಗಿದ್ದು, ಅವಳು ಸತ್ತಿದ್ದಾಳೆ ಎಂದು ಭಾವಿಸಿ ಬಸ್ರತ್ ಬೈಕ್ ಏರಿ ಪರಾರಿಯಾಗಿದ್ದಾನೆ.