ತುರುವೇಕೆರೆ: ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರ ಮುಖದಲ್ಲಿ ಸಂತೋಷ ಮನೆಮಾಡಿದೆ. ಅಶ್ವಿನಿ, ಭರಣಿ ಮಳೆಯ ಕೊರತೆಯಿಂದ ಮುಂದೇನು ಎಂದು ಚಿಂತಾಕ್ರಾಂತರಾಗಿದ್ದ ರೈತರಲ್ಲಿ ಕೃತಿಕೆ ಮಳೆ ಮಂದಹಾಸ ಮೂಡಿಸಿದ್ದು, ರೈತರು ಬಹಳ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಮುಂಗಾರಿನಲ್ಲಿ ಹೆಸರು, ಅಲಸಂದೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಉದ್ದೇಶದಿಂದ ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಭೂಮಿ ಹದ ಮಾಡಿಕೊಂಡಿದ್ದರು. ಅಲ್ಲದೆ ಭಿತ್ತನೆ ಬೀಜ, ಗೊಬ್ಬರವನ್ನು ಖರೀದಿ ಮಾಡಿ ಶೇಖರಿಸಿಟ್ಟುಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅಂದುಕೊಂಡಷ್ಟು ಮಳೆಯಾಗದ ಕಾರಣ ರೈತರಲ್ಲಿ ಆತಂಕ ಮನೆಮಾಡಿತ್ತು. ಆದರೆ ಅಲ್ಪಸ್ವಲ್ಪ ಮಳೆಯಾದ ಕಾರಣ ತಾಲೂಕಿನ ಹಲವೆಡೆ ರೈತರು ಹೆಸರು, ಅಲಸಂದೆ ಕಾಳುಗಳನ್ನು ಭಿತ್ತನೆ ಮಾಡಿದ್ದರು. ಈ ಬೆಳೆಗಳು ಈಗ ಕೃತಿಕೆ ಮಳೆ ಬೀಳುವ ವೇಳೆ ಮೊಳಕೆಯೊಡೆದು ಚಿಗುರೊಡೆದಿದ್ದು, ರೈತರು ಸಂತೋಷಪಡುವಂತೆ ಮಾಡಿದೆ.
ಕಳೆದ 3-4 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಹರ್ಷಗೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಆಗಬೇಕಿದ್ದ 665.9 ಮಿ.ಮೀಟರ್ ವಾಡಿಕೆ ಮಳೆ ಪೈಕಿ ಈವರೆಗೆ ಕೇವಲ 216 ಮಿ.ಮೀಟರ್ ಮಾತ್ರ ಮಳೆಯಾಗಿದೆ. ಈ ವರ್ಷ ಮಾರ್ಚ್ನಿಂದಲೇ ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ರೈತರು ಹೆಸರು, ಅಲಸಂದೆ ಬೀಜ ಭಿತ್ತನೆಯಲ್ಲಿ ನಿರತರಾಗಿದ್ದಾರೆ. ಪೂರ್ವಮುಂಗಾರು ತಡವಾದರೆ ಬೆಳೆ ಸರಿಯಾಗಿ ಬರುವುದಿಲ್ಲ ಎಂಬ ಲೆಕ್ಕಾಚಾರ ರೈತರದ್ದಾಗಿದೆಯಾದರೂ ಕೃತಿಕೆ ಮಳೆ ಚೆನ್ನಾಗಿ ಬಂದಿರುವ ಕಾರಣ ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈವರೆಗೆ ಬಂದಿರುವ ಮಳೆಯಿಂದ ಬೆಳೆಗೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಮೇ 18 ರಂದು ದಂಡಿನಶಿವರದಲ್ಲಿ 42 ಮಿ.ಮೀ, ತುರುವೇಕೆರೆ ಪಟ್ಟಣದಲ್ಲಿ 31.8 ಮಿ.ಮೀ, ದಬ್ಭೇಘಟ್ಟದಲ್ಲಿ 25.3 ಮಿ.ಮೀ, ಮಾಯಸಂದ್ರದಲ್ಲಿ 18.4 ಮಿ.ಮೀ., ಸಂಪಿಗೆಯಲ್ಲಿ 11 ಮಿ.ಮೀ ಮಳೆಯಾಗಿದ್ದರೆ, ಮೇ 19 ರಂದು ದಂಡಿನಶಿವರದಲ್ಲಿ 26 ಮಿ.ಮೀ, ತುರುವೇಕೆರೆ ಪಟ್ಟಣದಲ್ಲಿ 12.6 ಮಿ.ಮೀ, ದಬ್ಭೇಘಟ್ಟದಲ್ಲಿ 35.2 ಮಿ.ಮೀ, ಮಾಯಸಂದ್ರದಲ್ಲಿ 29.9 ಮಿ.ಮೀ., ಸಂಪಿಗೆಯಲ್ಲಿ 70.2 ಮಿ.ಮೀ ಹಾಗೂ ಮೇ 20 ರಂದು ದಂಡಿನಶಿವರದಲ್ಲಿ 28 ಮಿ.ಮೀ, ತುರುವೇಕೆರೆ ಪಟ್ಟಣದಲ್ಲಿ 39 ಮಿ.ಮೀ, ದಬ್ಭೇಘಟ್ಟದಲ್ಲಿ 28.1 ಮಿ.ಮೀ, ಮಾಯಸಂದ್ರದಲ್ಲಿ 58.2 ಮಿ.ಮೀ., ಸಂಪಿಗೆಯಲ್ಲಿ 16.2 ಮಿ.ಮೀ ಮಳೆಯಾಗಿದೆ. ಮಳೆಯಾಗಿದೆ.
ಮಾಧ್ಯಮದೊಂದಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪೂಜಾ ಮಾತನಾಡಿ, ತಾಲೂಕಿನ ಕಸಬಾ ಹೋಬಳಿಯಲ್ಲಿ 110 ಹೆಕ್ಟೇರಿನಲ್ಲಿ ಹೆಸರು, 30 ಹೆಕ್ಟೇರಿನಲ್ಲಿ ಅಲಸಂದೆ, ದಂಡಿನಶಿವರ ಹೋಬಳಿಯಲ್ಲಿ 90 ಹೆಕ್ಟೇರಿನಲ್ಲಿ ಹೆಸರು, 30 ಹೆಕ್ಟೇರಿನಲ್ಲಿ ಅಲಸಂದೆ, ಮಾಯಸಂದ್ರ ಹೋಬಳಿಯಲ್ಲಿ 110 ಹೆಕ್ಟೇರಿನಲ್ಲಿ ಹೆಸರು, 120 ಹೆಕ್ಟೇರಿನಲ್ಲಿ ಅಲಸಂದೆ ಬೀಜವನ್ನು ಭಿತ್ತನೆ ಮಾಡಲಾಗಿದೆ. 2025-26 ನೇ ಸಾಲಿನಲ್ಲಿ ಪೂರ್ವ ಮುಂಗಾರು ಭಿತ್ತನೆಗೆಂದು ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಭಿತ್ತನೆ ಬೀಜಗಳನ್ನು ಲಭ್ಯವಿರಿಸಲಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ 57.30 ಕ್ವಿಂಟಾಲ್ ಹೆಸರು, 43.20 ಕ್ವಿಂಟಾಲ್ ಅಲಸಂದೆ, 3.60 ಕ್ವಿಂಟಾಲ್ ತೊಗರಿ, 4.50 ಕ್ವಿಂಟಾಲ್ ಉದ್ದಿನ ಕಾಳು, 17.4 ಕ್ವಿಂಟಾಲ್ ರಾಗಿ ಭಿತ್ತನೆ ಬೀಜ ದಾಸ್ತಾನಿದ್ದು, ಈ ಪೈಕಿ ಈಗಾಗಲೇ 31.40 ಕ್ವಿಂಟಾಲ್ ಹೆಸರು, 24.60 ಕ್ವಿಂಟಾಲ್ ಅಲಸಂದೆ, 0.015 ಕ್ವಿಂಟಾಲ್ ತೊಗರಿ, 0.50 ಕ್ವಿಂಟಾಲ್ ಉದ್ದಿನ ಕಾಳನ್ನು ಭಿತ್ತನೆಗಾಗಿ ರೈತರಿಗೆ ವಿತರಿಸಲಾಗಿದೆ. ಇನ್ನೂ 25.90 ಕ್ವಿಂಟಾಲ್ ಹೆಸರು, 18.60 ಕ್ವಿಂಟಾಲ್ ಅಲಸಂದೆ, 3.45 ಕ್ವಿಂಟಾಲ್ ತೊಗರಿ, 4 ಕ್ವಿಂಟಾಲ್ ಉದ್ದು, 17.40 ಕ್ವಿಂಟಾಲ್ ರಾಗಿ ಭಿತ್ತನೆ ಬೀಜ ಲಭ್ಯವಿದ್ದು, ರೈತರು ಸಂಪರ್ಕ ಕೇಂದ್ರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




