78ನೇ ಸ್ವಾತಂತ್ರ್ಯ ದಿನಾಚರಣೆ
ಸರ್ವರ ಏಳಿಗೆ ನಮ್ಮೆಲ್ಲರ ಗುರಿಯಾಗಲಿ
-ತಹಶೀಲ್ದಾರರಾದ ಪ್ರಕಾಶ ನಾಶಿ
ಹುಬ್ಬಳ್ಳಿ
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವೆಲ್ಲರೂ ಸ್ಮರಿಸಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ. ಸರ್ವರ ಏಳಿಗೆ ನಮ್ಮೆಲ್ಲರ ಗುರಿಯಾಗಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ ಹೇಳಿದರು.
ಇಂದು ತಾಲೂಕು ಆಡಳಿತ ಸೌಧದಲ್ಲಿ 78 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತದಲ್ಲಿ ಪ್ರತಿ ವರ್ಷವು ಸಹ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಬ್ರಿಟಿಷರ ಆಳ್ವಿಕೆಯಿಂದ 1947 ರಲ್ಲಿ ದೇಶ ಬಿಡುಗಡೆ ಹೊಂದಿದ ದಿನವಾಗಿ ಗುರುತಿಸಲು, ಆಚರಣೆ ಮಾಡಲಾಗುತ್ತದೆ.
ಈ ದಿನದಂದು ದೇಶಭಕ್ತಿಯ ಉತ್ಸಾಹ, ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣ ದೇಶದ ಎಲ್ಲೆಡೆ ಕಂಡು ಬರುತ್ತವೆ. ಅಂತೆಯೇ ನಾವು ಸಹ ಇಂದು ಇಲ್ಲಿ ಸ್ವಾತಂತ್ರ್ಯ ದಿನ ಆಚರಣೆಗೆ ಸೇರಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕಾಗಿದೆ ಎಂದರು.
ಸ್ವತಂತ್ರದ ಮಹತ್ವದ ಜತೆಗೆ, ಇಂದು ನಮ್ಮ ಹೊಣೆ, ಜವಾಬ್ದಾರಿಗಳೇನು, ಎಂಬುದನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕಾಗಿದೆ. ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ, ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲ-ಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಹ, ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಯಾವ ದೇಶದ ಪ್ರಜೆಗಳಿಗೆ, ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ, ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ ಎಂದರು.
ಅಪಾರ ಬೆಲೆ ತೆತ್ತು ಸಂಪಾದಿಸಿರುವ, ಸ್ವಾತಂತ್ರ್ಯವನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವ ಹೊಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಹಕ್ಕಿನ ಜೊತೆ ಕರ್ತವ್ಯವೂ ಉಂಟು. ಅಮೂಲ್ಯ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ವ್ಯಕ್ತಿಗಿಂತ ದೇಶ ಮುಖ್ಯ. ಸಮುದಾಯಕ್ಕಿಂತ ಸಮಾಜ ಮುಖ್ಯ. ವ್ಯಕ್ತಿ ಹಿತಕ್ಕಿಂತ ಸಮಸ್ತರ ಹಿತ ಮುಖ್ಯ ಎಂಬ ಚಿಂತನೆಗಳು ಹೀಗಿದ್ದಾಗ ಮಾತ್ರ, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ ಸುರಕ್ಷಿತ. ಎಲ್ಲರ ಹಿತ ಕಾಯುವುದು, ನಮ್ಮ ನಿಮ್ಮೆಲ್ಲರ ಆಶಯವಾಗಬೇಕು ಎಂದು ತಿಳಿಸಿದರು.
ಸರ್ಕಾರವು ರೈತರ ಹಿತದೃಷ್ಟಿಯಿಂದ, ರೈತರ ಜಮೀನುಗಳಿಗೆ ಮೋಸವಾಗದಂತೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಪಹಣಿಯೊಂದಿಗೆ ಆಧಾರ ಸೀಡಿಂಗ್ ಮಾಡುವ ಕಾರ್ಯವನ್ನು ಜಾರಿಗೆ ತಂದಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯ ಸುಮಾರು 68.63 ಪ್ರತಿಶತ: ರೈತರು ತಮ್ಮ ಜಮೀನಿನ ಪಹಣಿಯೊಂದಿಗೆ ಆಧಾರ ಜೋಡಣೆಯನ್ನು ಮಾಡಿದ್ದು, ಇನ್ನುಳಿದ 31.37 ಪ್ರತಿಶತ: ರೈತರು, ಕೂಡಲೇ ಆಧಾರ ಜೋಡಣೆ ಮಾಡಿಸಿಕೊಳ್ಳುವಂತೆ ಎಲ್ಲ ರೈತ ಭಾಂಧವರಲ್ಲಿ ವಿನಂತಿಸುತ್ತೇನೆ. ಕಳೆದ 2 ತಿಂಗಳುಗಳಿಂದ, ಡೆಂಗ್ಯೂ ಸೋಂಕು ಹರಡುತ್ತಿದ್ದು, ಅದರ ನಿಯಂತ್ರಣಕ್ಕಾಗಿ, ನಾವು-ನೀವೆಲ್ಲರೂ ಸೇರಿ ಸಾರ್ವಜನಿಕರ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದೇವೆ. ಸೊಂಕನ್ನು ತಡೆಗಟ್ಟುವ, ಎಲ್ಲ ಮುನ್ನೇಚ್ಚರಿಕೆಗಳನ್ನು ಪಾಲಿಸಲು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು, ಹಲವಾರು ಕಾರ್ಯಕ್ರಮಗಳನ್ನು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮೀಣ ಮಟ್ಟದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತಿಯ ನೌಕರರು, ಗ್ರಾಮ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಪ್ರತಿ ದಿನ ಈ ಒಂದು ಸೋಂಕನ್ನು ಹರಡುವುದನ್ನು ನಿಲ್ಲಿಸುವಿಕೆಗೆ ಶ್ರಮಿಸುತ್ತಿದ್ದೇವೆ, ಮುಂದೆಯೂ ಶ್ರಮಿಸೋಣ ಎಂದರು.
ಶಾಸಕರಾದ ಎನ್. ಹೆಚ್. ಕೊನರೆಡ್ಡಿ ಮಾತನಾಡಿ, ಎಲ್ಲರೂ ದೇಶದ ಬಗ್ಗೆ ಹೆಮ್ಮೆ ಪಡಬೇಕು. ಇಡೀ ದೇಶದಾದ್ಯಂತ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಹಬ್ಬವನ್ನು ನಮ್ಮ ಹಬ್ಬ ಎಂದು ಆಚರಣೆ ಮಾಡಬೇಕು. ನವಲಗುಂದ ವಿಧಾನ ಸಭೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಹಲವಾರು ಕಾಮಗಾರಿಗಳು ನನ್ನ ಕ್ಷೇತ್ರದಲ್ಲಿ ನಡೆದಿವೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಬೊಮ್ಮಕ್ಕನವರ, ಅಪರ ತಹಶೀಲ್ದಾರರಾದ ಜಿ.ವಿ.ಪಾಟೀಲ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ.ಕರವೀರಮಠ ಸೇರಿದಂತೆ ಪೋಲಿಸ್ ಇಲಾಖೆ, ಭೂ ದಾಖಲೆಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನೋಂದಣಿ ಇಲಾಖೆ, ಖಜಾನೆ ಇಲಾಖೆ ವಿವಿಧ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
ಸುಧೀರ್ ಕುಲಕರ್ಣಿ