ತುರುವೇಕೆರೆ : ಬೆಂಗಳೂರಿನ ಪ್ರತಿಷ್ಠಿತ ವಕೀಲರ ಸಂಘದ (ಎಬಿಬಿ) ನೂತನ ಪ್ರಧಾನ ಕಾರ್ಯದರ್ಶಿಯಾಗಿ ತುರುವೇಕೆರೆ ತಾಲ್ಲೂಕು ಟಿ.ಹೊಸಹಳ್ಳಿ ಗ್ರಾಮದ ಪ್ರವೀಣ್ ಗೌಡ ಹೆಚ್.ವಿ. ಆಯ್ಕೆಯಾಗಿದ್ದಾರೆ. ಸಂಘದ ವಿವಿಧ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಪ್ರವೀಣ್ ಗೌಡ ಹೆಚ್.ವಿ. ಭರ್ಜರಿ ಜಯಗಳಿಸಿದ್ದಾರೆ.
ಏಷ್ಯಾದಲ್ಲೇ ಅತಿ ದೊಡ್ಡ ವಕೀಲರ ಸಂಘಟನೆಯಾಗಿರುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಪ್ರವೀಣ್ ಗೌಡ ಹೆಚ್.ವಿ. ಅತಿ ಹೆಚ್ಚು ಮತಗಳನ್ನು ಪಡೆದು ಜಯಗಳಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವಕನೊಬ್ಬ ರಾಜ್ಯ ಮಟ್ಟದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆ ಏರಿರುವುದು ತಾಲ್ಲೂಕಿಗೆ ಹೆಮ್ಮೆ ತರುವಂತಹ ಸಂಗತಿಯಾಗಿದೆ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಪ್ರವೀಣ್ ಗೌಡ ಹೆಚ್.ವಿ. ಅವರು 4854 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹರೀಶ್ ಎಂ.ಟಿ. (3728) ಅವರನ್ನು 1126 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಇದೇ ಹುದ್ದೆಗೆ ಸ್ಪರ್ಧಿಸಿದ್ದ ಶಿವಮೂರ್ತಿ (2321), ಅಕ್ಕಿ ಮಂಜುನಾಥ್ ಗೌಡ (2188), ಚಂದ್ರಶೇಖರ್ ಎಂ.ಹೆಚ್. (124) ಮತಗಳನ್ನು ಪಡೆದಿದ್ದಾರೆ. ತೀವ್ರ ಪೈಪೋಟಿ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಪ್ರವೀಣ್ ಗೌಡ ಹೆಚ್.ವಿ. ಅವರು 4854 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಜಯಗಳಿಸಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರವೀಣ್ ಗೌಡ ಹೆಚ್.ವಿ. ಅವರನ್ನು ತಾಲ್ಲೂಕು ಒಕ್ಕಲಿಗರ ಸಂಘ, ಒಕ್ಕಲಿಗ ಮಹಿಳಾ ಸಂಘ, ವಿಶ್ವವಿಜಯ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಟಿ.ಹೊಸಹಳ್ಳಿ ಗ್ರಾಮಸ್ಥರು, ಕುಟುಂಬ ವರ್ಗ, ಅಭಿಮಾನಿಗಳು, ಹಿತೈಷಿಗಳು ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




