ಸಿರುಗುಪ್ಪ : ನಗರದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಜನವರಿ ತಿಂಗಳಲ್ಲಿ ಬರುವ ಜಯಂತಿಗಳ ಆಚರಣೆಗಳ ಪೂರ್ವಸಿದ್ದತೆ ಕುರಿತು ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜನವರಿ 14 ರಂದು ನಡೆಯುವ ಶ್ರೀ ಶಿವಯೋಗಿ ಸಿದ್ದರಾಮ ಜಯಂತಿ, ಜನವರಿ 19 ರ ಶ್ರೀ ಮಹಾಯೋಗಿ ವೇಮನ ಜಯಂತಿ ಹಾಗೂ 21ರಂದು ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮದ ಬಗ್ಗೆ ಆಯಾ ಸಮಾಜದ ಮುಖಂಡರುಗಳ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಆಲಿಸಲಾಯಿತು.
ಸಭೆಯಲ್ಲಿ ತಾಲೂಕು ಕ್ರೀಡಾಂಗಣದಿಂದ ನೇತಾಜಿ ವ್ಯಾಯಾಮ ಶಾಲೆವರೆಗೂ ಶ್ರೀ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಯ ಮೂಲಕ ಜಯಂತಿ ಆಚರಿಸುವುದಾಗಿ, ನಗರದ ಶ್ರೀ ಅಂಬಿಗರ ಚೌಡಯ್ಯ ವೃತ್ತದಿಂದ ತಾಲೂಕು ಕಛೇರಿವರೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆಯೊಂದಿಗೆ ಜಯಂತಿ ಆಚರಿಸುವುದಾಗಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಸಿ.ಡಿ.ಪಿ.ಓ ಕಛೇರಿಯಲ್ಲಿ ಆಚರಿಸುವ ಬಗ್ಗೆ ತಿಳಿಸಲಾಯಿತು.ಜಯಂತಿಯ ನಿರ್ಲಕ್ಷತೆ ತೋರುತ್ತಿರುವ ಶಿಕ್ಷಣ ಇಲಾಖೆಗಳಲ್ಲಿನ ಶಾಲಾ ಕಾಲೇಜುಗಳು, ಗ್ರಾಮ ಪಂಚಾಯಿತಿಗಳ ಬಗ್ಗೆ ಆರೋಪಿಸಿದ ಬೋವಿ ಮತ್ತು ಗಂಗಾಮತಸ್ಥರ ಸಂಘದ ಮುಖಂಡರು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಆಚರಿಸಬೇಕೆಂದು ಆದೇಶ ನೀಡಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ ಅವರು ಮಾತನಾಡಿ ಸಮಾಜಕ್ಕಾಗಿ, ದೇಶಕ್ಕಾಗಿ ತಮ್ಮ ಜೀವನವನ್ನೇ ಮೀಸಲಾಗಿರಿಸಿದ್ದ ಮಹಾನ್ ಪುರುಷರ ಜಯಂತಿಗಳ ಆಚರಣೆಯನ್ನು ಎಲ್ಲಾ ಇಲಾಖೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕೆಂದು ಸೂಚನೆ ನೀಡಿದರು.
ಇದೇ ವೇಳೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎ.ಗಾದಿಲಿಂಗಪ್ಪ, ಇನ್ನಿತರ ಇಲಾಖೆಗಳ ಅಧಿಕಾರಿಗಳು, ಬೋವಿ ಮತ್ತು ಗಂಗಾಮತಸ್ಥ ಸಂಘದ ಪದಾಧಿಕಾರಿಗಳು, ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ