ಮೊಳಕಾಲ್ಮುರು:ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಸಂಜೆ 4:00ಗೆ ಡಾ. ಬಿಆರ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಜಯಂತಿ ಆಚರಣೆಗಳ ಕುರಿತಾಗಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮೊದಲಿಗೆ ಇಲಾಖೆಯ ಬಹುತೇಕ ಅಧಿಕಾರಿಗಳು ಗೈರಾಗಿರುವುದನ್ನು ಮನಗಂಡ ದಲಿತಪರ ಸಂಘಟನೆಗಳ ಮುಖಂಡರು ಅಧಿಕಾರಿಗಳ ವಿರುದ್ಧ ಕೆಂಡಕಾರಿದರು,ಜಯಂತಿ ಕಾರ್ಯಕ್ರಮ ಮೂರ್ನಾಲ್ಕು ವರ್ಷಗಳ ನಂತರ ನಡೆಯುತ್ತಿದೆ ಕಾರ್ಯಕ್ರಮ ಯಶಸ್ವೀಯಾಗಲು ಎಲ್ಲಾ ಇಲಾಖೆಯ ಅಧಿಕಾರಿಗಳು ಬರಲೇಬೇಕು ಎಂದು ದಲಿತ ಮುಖಂಡರಾದ ಪ್ರಕಾಶ, ಶ್ರೀನಿವಾಸ್ ಮೂರ್ತಿ,ಮೊಗಲಹಳ್ಳಿ ಜಯಣ್ಣ,ಬಿಜಿಕೆರೆ ನಾಗಭೂಷಣ್, ಚಿಕ್ಕೋಬನಹಳ್ಳಿ ಕರಿಬಸಪ್ಪ ದೇವಸಮುದ್ರ ಚಂದ್ರು, ನೇರ್ಲಹಳ್ಳಿ ಚಂದ್ರು ಪಟ್ಟು ಹಿಡಿದರು,ಇದೇ ವೇಳೆಗೆ ಸಭೆಗೆ ಆಗಮಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಗಮನಕ್ಕೆ ತಂದರು.
ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ ಪೂರ್ವಭಾವಿ ಸಭೆಗೆ ಬಾರದಿರುವ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ನೀಡಬೇಕು, ಈ ಆಶಿಸ್ತನ್ನು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಸಹಿಸುವುದಿಲ್ಲ ಎಂದು ಗೈರಾದ ಅಧಿಕಾರಿಗಳ ವಿರುದ್ಧ ಗರಂ ಆದರು, ವಿವಿಧ ಇಲಾಖೆಗಳ ಅಧಿಕಾರಿಗಳು ಬಾರದೇ ಇರುವ ಜವಾಬ್ದಾರಿಯನ್ನು ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಹೊಣೆ ಹೊರಲಿ ಈ ಸಭೆಯ ಪರವಾಗಿ ನೀವೇ ಕ್ಷಮೆ ಕೇಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು,ಶಾಸಕರ ಸೂಚನೆಯಂತೆ ತಹಶೀಲ್ದಾರ್ ಜಗದೀಶ್ ಸಭೆಗೆ ಕ್ಷಮೆ ಕೋರಿದ ನಂತರ ಸಭೆ ಮುಂದುವರಿಯಿತು.
ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಕಾರ್ಯಕ್ರಮದ ಸ್ಥಳ ಮತ್ತು ಕಾರ್ಯಕ್ರಮದ ಆಯೋಜನೆ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ದಲಿತ ಸಂಘಟನೆಯ ಮುಖಂಡರಾದ ಕೊಂಡಪುರ ಪರಮೇಶ್ ಮಾತನಾಡಿ ಈ ಬಾರಿ ರಾಂಪುರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯ ಆಚರಿಸಬೇಕು ಎಂದರು,ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ನಾನು ಕೂಡ ನನ್ನ ಸಲಹೆ ಹೇಳುತ್ತೇನೆ ಸರ್ಕಾರದಿಂದ ಈಗಾಗಲೇ ಎರಡು ಎಕರೆ ಡಾ. ಬಿಆರ್ ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡಿಸಿದ್ದೇನೆ.ಕಟ್ಟಡ ನಿರ್ಮಾಣಕ್ಕೆ ಮೂರು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಹಾಗಾಗಿ ಪಟ್ಟಣದ ಹೊರವಲಯದಲ್ಲಿ ಈಗಾಗಲೇ ಮಂಜೂರಾಗಿರುವ ಎರಡು ಎಕರೆ ಪ್ರದೇಶದಲ್ಲೋ ಅಂಬೇಡ್ಕರ್ ಜಯಂತಿ ದಿನದಂದು ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಇದೇ ಸ್ಥಳದಲ್ಲಿ ಕಾರ್ಯಕ್ರಮ ಮಾಡೋಣ ಇದು ನಿಮ್ಮ ಒಪ್ಪಿಗೆ ಇದ್ದರೆ ಎಂದು ಸಭೆಯ ಗಮನಕ್ಕೆ ತಂದರು.
ಶಾಸಕರ ಸಲಹೆಯಂತೆ ಸಭೆಯಲ್ಲಿ ದಲಿತ ಮುಖಂಡರು ತೀರ್ಮಾನಿಸಿ ಭವನ ನಿರ್ಮಾಣ ಶಂಕುಸ್ಥಾಪನೆ ಅಂದೇ ನೆರವೇರಿಸುವುದು ಸೂಕ್ತ ಆದರೆ ಪ್ರತಿ ವರ್ಷದಂತೆ ಶ್ರೀನುಂಕಮಲೆ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು ಮುಖ್ಯರಸ್ತೆಯಲ್ಲಿ ಬೆಳ್ಳಿರಥದಲ್ಲಿ ಡಾ.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಭಾವಚಿತ್ರವನ್ನು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಮಾಡಬೇಕು ಎನ್ನುವ ಒಕ್ಕೂರುಲಿನ ತೀರ್ಮಾನವನ್ನು ದಲಿತ ಮುಖಂಡರು ಮಾಡಿದರು.