ಉತ್ತರ ಪ್ರದೇಶ : ಮಹಾಕುಂಭಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರ ಮೃತದೇಹವನ್ನು ಏರ್ ಲಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ಪ್ರಯಾಗ್ ರಾಜ್ ನಿಂದ ಆಂಬುಲೆನ್ಸ್ ಮೂಲಕ ದಿಲ್ಲಿಗೆ ಮೃತದೇಹಗಳನ್ನು ತಂದು ಅಲ್ಲಿಂದ ಬೆಳಗಾವಿಗೆ ಏರ್ ಲಿಫ್ಟ್ ಮಾಡಲು ತೀರ್ಮಾನ ಮಾಡಲಾಗಿದೆ.
ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳಾದ ASP ಶೃತಿ ಹಾಗೂ KAS ಅಧಿಕಾರಿ ಹರ್ಷ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬಹುತೇಕ ಇವತ್ತು ಸಂಜೆ ಮೃತದೇಹಗಳು ಬೆಳಗಾವಿ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಯಾತ್ರಿಕರು ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಿದ್ದರು. ಏಕಾಏಕಿ ಕೋಟ್ಯಾಂತರ ಭಕ್ತರು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು . ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ಕು ಮಂದಿ ಸಾವನ್ನಪ್ಪಿದ್ದರು.
ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠನ, ಮೇಘಾ ಹತ್ತರವಾಠ,ಶೆಟ್ಟಿಗಲ್ಲಿ ನಿಚಾಸಿ ಅರುಣ ಗೋರ್ಪಡೆ,ಶಿವಾಜಿ ನಗರದ ನಿವಾಸಿ ಮಹಾದೇವಿ ಎಂಬುವವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು. 13 ಜನರ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿತ್ತು.
ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ವಾಪಸ್ಸು ತರಲು ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.