ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ನಡೆಯಲಿದೆ.
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನಕ್ಕೆ ನೇಮಕಾತಿ ಅಧಿಕಾರ ರಾಜ್ಯಪಾಲರಿಂದ ಸಿಎಂಗೆ ನೀಡುವ ವಿಧೇಯಕ, ಗಣಿ ಇಲಾಖೆಯಲ್ಲಿ ಹೊಸ ತೆರಿಗೆ ಪ್ರಸ್ತಾಪ ಸೇರಿ ಹಲವು ವಿಧೇಯಕಗಳು, ತಿದ್ದುಪಡಿ ವಿಧೇಯಕಗಳು ಸೇರಿ ಒಟ್ಟು 15 ವಿಧೇಯಕಗಳನ್ನು ಮಂಡಿಸಲಾಗುವುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಗಳ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಲಾಗುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ಆದ್ಯಾದೇಶ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಆದ್ಯಾದೇಶ 2024 ಗಳಿಗೆ ಒಪ್ಪಿಗೆ ಪಡೆಯಲಾಗುವುದು.
ಖಾಸಗಿ ವಿಧೇಯಕ
ದರ್ಶನ್ ಪುಟ್ಟಣ್ಣಯ್ಯ ಕರ್ನಾಟಕದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಖಾಸಗಿ ವಿಧೇಯಕ ಮಂಡಿಸುವರು. ಎಂ.ವೈ. ಪಾಟೀಲ ಅವರಿಂದ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಹೆಚ್.ಕೆ. ಸುರೇಶ್ ಅವರಿಂದ ಬೇಲೂರು ಹಳೇಬೀಡು ವಿಶ್ವ ಪರಂಪರೆಯ ಪ್ರದೇಶ ನಿರ್ವಹಣೆ ಪ್ರಾಧಿಕಾರ ವಿಧೇಯಕ ಮಂಡಿಸಲಾಗುವುದು.
ಅಧಿವೇಶನ ಮೊಟಕು
ಡಿಸೆಂಬರ್ 9 ರಿಂದ 20 ರವರೆಗೆ 10 ದಿನಗಳ ಕಾಲ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಡಿಸೆಂಬರ್ 20 ರಿಂದ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಅವಧಿಗಿಂತ ಒಂದು ದಿನ ಮೊದಲೇ ಡಿಸೆಂಬರ್ 19ರಂದು ಅಧಿವೇಶನ ಮೊಟಕುಗೊಳಿಸುವ ಸಾಧ್ಯತೆ ಇದೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.