ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹಾಗೂ ಶುಕ್ರವಾರದಂದು ಉತ್ತರ ಭಾರತದ ನಾಲ್ಕು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಎರಡು ದಿನಗಳ ಕಾಲ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಮೇ 29ರಂದು ಮೋದಿ ಸಿಕ್ಕಿಂಗೆ ಭೇಟಿ ನೀಡಲಿದ್ದು ಬೆಳಗ್ಗೆ 11 ಗಂಟೆಗೆ Sikkim@50 ವೇರ್ ಪ್ರೋಗ್ರೆಸ್ ಮೀಟ್ಸ್ ಪರ್ಪಸ್ ಆಯಂಡ್ ನೇಚರ್ ನರ್ಚರ್ಸ್ ಗ್ರೋಥ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಂತರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಮೋದಿ, ಮಧ್ಯಾಹ್ನ 2.15ರ ಸುಮಾರಿಗೆ ಅಲಿಪುರ್ದಾರ್, ಕೂಚ್ ಬಿಹಾರ್ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಯೋಜನೆಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಳಿಕ ಸಂಜೆ 5:45ರ ಸುಮಾರಿಗೆ ಬಿಹಾರಕ್ಕೆ ಭೇಟಿ ನೀಡಿ ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟಿಸಲಿದ್ದಾರೆ.
ಮೇ 30ರಂದು ಬೆಳಗ್ಗೆ 11 ಗಂಟೆಗೆ ಬಿಹಾರದ ಕರಕಟ್ನಲ್ಲಿ 48,520 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದಾದ ಬಳಿಕ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, 2:45ರ ವೇಳೆಗೆ ಕಾನ್ಪುರ ನಗರದಲ್ಲಿ ಸುಮಾರು 20,900 ಕೋಟಿ ರೂ.ಗಳಷ್ಟು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.




