ನವದೆಹಲಿ: ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಈ ವೇಳೆ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರು ಅತ್ಯಂತ ಶಕ್ತಿಶಾಲಿ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ ಮೋದಿಯವರು ದೇವರಲ್ಲ. ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಮೂರ್ನಾಲ್ಕು ದಿನಗಳ ಹಿಂದೆ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೆ. ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನಿಮಗೆ ಏನು ಸಿಕ್ಕಿತು ಎಂದು ಪ್ರಶ್ನಿಸಿದೆ. ಆಗ ಅವರು ನಾವು ದೆಹಲಿ ಸರ್ಕಾರವನ್ನು ಹಳಿತಪ್ಪಿಸಿದೆವು ಎಂದರು.
ಬಳಿಕ ಅವರು ಹೇಳಿದ ಮಾತು ನಿಜಕ್ಕೂ ನನಗೆ ಆಶ್ಚರ್ಯ ತಂದಿತು. ಎರಡು ಕೋಟಿ ಜನರ ಜೀವನವನ್ನು ಹಾಳು ಮಾಡುವ ಮೂಲಕ ಅವರು ಸಂತೋಷವಾಗಿದ್ದಾರೆ. ರಾಜಕೀಯವು ಅಂತಹ ಕೊಳಕು ಮಟ್ಟಕ್ಕೆ ಇಳಿಯಬಹುದೇ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.