ಯಾದಗಿರಿ : ಬೆಲೆ ಏರಿಕೆಗೆ ಕಾರಣವಾಗಿರುವುದು ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಮೋದಿ ಬರುವ ಮೊದಲು ಚಿನ್ನ, ಪೆಟ್ರೋಲ್, ಡೀಸೆಲ್, ಔಷಧ, ರಸಗೊಬ್ಬರ, ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆ ಎಷ್ಟಿತ್ತು? ಮೋದಿ ಬಂದ ಬಳಿಕ ಎಷ್ಟು ಏರಿಕೆಯಾಗಿದೆ ನೋಡಿ. ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ನರೇಂದ್ರ ಮೋದಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕಿಡಿಕಾರಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಆಯೋಜಿಸಿರುವ ‘ಆರೋಗ್ಯ ಆವಿಷ್ಕಾರ’ ಯೋಜನೆಯ ಅಡಿಯಲ್ಲಿ 440.63 ಕೋಟಿ ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಿ, ಬಂಜಾರ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ‘ಸುಳ್ಳೇ ಬಿಜೆಪಿಯ ಮನೆ ದೇವರು.
ಬಿಜೆಪಿಗೆ ಅಧಿಕಾರ ಇದ್ದಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿ 371 ಜೆ ಗೆ ವಿರುದ್ಧವಿತ್ತು. ಉಪ ಪ್ರಧಾನಿ ಆಗಿದ್ದ ಎಲ್.ಕೆ.ಅಡ್ವಾಣಿ ಅವರು 371ಜೆ ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದರು. ಕೊನೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಖರ್ಗೆ, ಧರಂಸಿಂಗ್ ಅವ್ ಹೋರಾಟಕ್ಕೆ ಮಾನ್ಯತೆ ನೀಡಿ 371ಜೆ ಜಾರಿ ಮಾಡಿದರು’ ಎಂದರು.
‘ನಾವು ಬಸವಣ್ಣನವರ ಆಶಯದಂತೆ ನುಡಿದಂತೆ ನಡೆಯುವರು. ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಐದು ಗ್ಯಾರಂಟಿಗಳು ಸೇರಿ 200 ಭರವಸೆಗಳು ಈಡೇರಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧಿಸಿ ತೋರಿಸುತ್ತೇವೆ’ ಎಂದರು.
‘ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿರುವುದು ಆರ್ಥಿಕವಾಗಿ ರಾಜ್ಯ ಪ್ರಗತಿ ಪಥದಲ್ಲಿರುವುದಕ್ಕೆ ಸಾಕ್ಷಿ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.




