ತುರುವೇಕೆರೆ: ತಿಂಗಳುಗಟ್ಟಲೆಯಿಂದ ನಮಗೆ ಗೌರವಧನ ನೀಡದೆ ಪ್ರಾಂಶುಪಾಲರು ಸತಾಯಿಸುತ್ತಿದ್ದಾರೆ, ವೇತನ ಕೇಳಲು ಹೋದರೆ ವಿಷ ಕುಡಿಯುತ್ತೇನೆಂದು ಹೆದರಿಸುತ್ತಾರೆ, ಗೌರವಧನವೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಕುಟುಂಬದ ನಿರ್ವಹಣೆಗೂ ಬಿಡಿಗಾಸಿಲ್ಲದ ಪರಿಸ್ಥಿತಿ ಎದುರಾಗಿದೆ. ಸಮಾಜದಲ್ಲಿ ಉಪನ್ಯಾಸಕ ಎಂಬ ಸ್ಥಾನ, ಆದರೆ ಜೇಬು ಖಾಲಿ, ಜೀವನ ದುಸ್ಥರವಾಗಿದೆ. ಮನೆಯಲ್ಲಿ ಮೂರು ಕಾಸಿನ ಬೆಲೆ ಇಲ್ಲದಂತಾಗಿದೆ. ಇದಕ್ಕೆಲ್ಲಾ ವೇತನ ನೀಡದ ಪ್ರಾಂಶುಪಾಲರೇ ಕಾರಣ ಎಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ಗೋಳಿನ ಸರಮಾಲೆಯನ್ನೇ ಮಾಧ್ಯಮದ ಹಂಚಿಕೊಂಡರು.
ಕಳೆದ 2023-24 ಹಾಗೂ 2024-25 ಸಾಲಿನಲ್ಲಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದವರಿಗೆ ಗೌರವಧನ ಬಾಕಿ ಇದೆ. ಕಳೆದ ವರ್ಷದ ಗೌರವಧನವನ್ನೇ ಕೆಲವರಿಗೆ ನೀಡಿಲ್ಲ. 2024-25 ನೇ ಸಾಲಿನಲ್ಲೂ ಕೆಲವು ಅತಿಥಿ ಉಪನ್ಯಾಸಕರಿಗೆ ಕೆಲವು ತಿಂಗಳ ವೇತನ ಬಂದಿಲ್ಲ. ವಾಸ್ತವವಾಗಿ 2023-24 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಕಾಲೇಜಿನ ಅತಿಥಿ ಉಪನ್ಯಾಸಕರುಗಳಿಗೆ ಸರ್ಕಾರ ಗೌರವಧನ ಬಿಡುಗಡೆಗೊಳಿಸಿದೆ. ಹೆಚ್ಚುವರಿ ಅನುದಾನವೂ ಸಹ ಬಿಡುಗಡೆಯಾಗಿತ್ತು. ಆದರೆ ತುರುವೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನಂತರಾಮು ಅವರು ಮಾತ್ರ ಕಾಲೇಜಿನಲ್ಲಿ ಕೆಲಸ ಮಾಡಿರುವ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಉಪನಿರ್ದೇಶಕರಿಗೆ, ಸರ್ಕಾರಕ್ಕೆ ಕಳಿಸದ ಕಾರಣ ಒಂದು ರೂಪಾಯಿಯೂ ಸಹ ಕಾಲೇಜಿಗೆ ಬಿಡುಗಡೆ ಆಗಿಲ್ಲ. ಇದಕ್ಕೆ ಪ್ರಾಂಶುಪಾಲರ ನಿರ್ಲಕ್ಷ್ಯವೇ ಕಾರಣ ಎಂದು ಅತಿಥಿ ಉಪನ್ಯಾಸಕರು ದೂರಿದರು.
ತುರುವೇಕೆರೆ ತಾಲೂಕಿನಲ್ಲಿ ದಂಡಿನಶಿವರ, ಶೆಟ್ಟಗೊಂಡನಹಳ್ಳಿ ಕಾಲೇಜುಗಳು, ಪಟ್ಟಣದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಪೂರ್ಣ ಪ್ರಮಾಣದಲ್ಲಿ ಗೌರವಧನ ದೊರಕಿದೆ, ಈ ಬಗ್ಗೆ ಸಂತೋಷವಿದೆ. ಆದರೆ ನಾವೇನು ತಪ್ಪು ಮಾಡಿದ್ದೇವೆ, ಸರಿಯಾದ ಸಮಯಕ್ಕೆ ಕಾಲೇಜಿಗೆ ಹಾಜರಾಗಿ ಮಕ್ಕಳಿಗೆ ಪಾಠ ಮಾಡಿದ್ದೇವೆ, ನಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿಭಾಯಿಸಿದ್ದೇವೆ. ಆದರೆ ಗೌರವಧನ ಮಾತ್ರ ನೀಡುತ್ತಿಲ್ಲ. ಗೌರವಧನ ಕೇಳಿದರೆ ಒತ್ತಡ ಹಾಕುತ್ತೀರಾ, ವಿಷ ಕುಡಿಯುತ್ತೇನೆಂದು ಪ್ರಾಂಶುಪಾಲರು ಹೆದರಿಸುತ್ತಾರೆ, ಆದರೆ ವಾಸ್ತವವಾಗಿ ವಿಷ ಕುಡಿಯಬೇಕಾದ ಪರಿಸ್ಥಿತಿ ಅತಿಥಿ ಉಪನ್ಯಾಸಕರದ್ದಾಗಿದೆ ಎಂದು ಕಣ್ಣೀರು ಹಾಕಿದರು.
ಅತಿಥಿ ಉಪನ್ಯಾಸಕರು ಗೌರವಧನವಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದೇವೆ.
ಕ್ಷೇತ್ರದ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಮಧ್ಯಪ್ರವೇಶಿಸಿ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು. ಅತಿಥಿ ಉಪನ್ಯಾಸಕರಿಗೆ ನ್ಯಾಯಯುತವಾಗಿ ದೊರಕಬೇಕಾದ ಗೌರವಧನವನ್ನು ಕೊಡಿಸಿ ಗೌರವಯುತವಾಗಿ ಬದುಕಲು ನೆರವಾಗಬೇಕೆಂದು ವಿನಂತಿಸಿದರು.
ಪ್ರಾಂಶುಪಾಲರು 2-3 ದಿನದಲ್ಲಿ ಅತಿಥಿ ಉಪನ್ಯಾಸಕರ ಗೌರವಧನ ನೀಡದಿದ್ದರೆ ಕಾಲೇಜಿನ ಎದುರು ಧರಣಿನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ವಾಸು, ನಿತ್ಯಾನಂದ್, ಹರೀಶ್, ಸುಧಾಕರ್, ಶೋಭಾ, ಅರ್ಪಿತ, ವಿಜಯಕುಮಾರ್, ಪೃಥ್ವಿ, ಪವನ್ ಉಪಸ್ಥಿತರಿದ್ದು ಅಳಲು ತೋಡಿಕೊಂಡರು.
ವರದಿ: ಗಿರೀಶ್ ಕೆ ಭಟ್