ಕಲಬುರಗಿ : ಬೀದರ್ನ ಭಾಲ್ಕಿಯ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರು, ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಮರೆಮಾಚಲು ಹೀಗೆ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ರಾಜೀನಾಮೆ ಕೇಳುವುದು ಬಿಜೆಪಿಯವರಿಗೆ ಫ್ಯಾಷನ್ ಆಗಿದೆ. ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು, ನೀವು ಕೊಡಿ ಅಂತಿದ್ದಾರೆ. ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರು ನೇರವಾಗಿ ಉಲ್ಲೇಖವಾಗಿತ್ತು. ಸಚಿನ್ ಬರೆದಿಟ್ಟ ಡೆತ್ ನೋಟ್ನಲ್ಲಿ ನನ್ನ ಹೆಸರು ಉಲ್ಲೇಖವಿದೆಯಾ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ನನ್ನ ಹೆಸರು ತರಲು ಬಿಜೆಪಿ ಈ ವಿಚಾರವನ್ನು ಗಂಭೀರವಾಗಿಸಿದೆ. ಪ್ರತಿದಿನ ನನ್ನ ಹೆಸರು ಹೇಳದಿದ್ದರೆ ಅವರಿಗೆ ತಿಂದ ಆಹಾರ ಜೀರ್ಣ ಆಗಲ್ಲ. ಬಿಜೆಪಿಯವರ ಮೇಲೆ ಮಾನನಷ್ಠ ಮೊಕದ್ದಮೆ ಹೂಡಿದ್ದೇನೆ ಎಂದರು.
ಪೂಜ್ಯ ಅಪ್ಪಾಜಿಯವರದ್ದು ಎಫ್ಎಸ್ಎಲ್ನಲ್ಲಿ ದೃಢವಾಗಿದೆ. ಬಿಎಸ್ವೈ ಪೋಕ್ಸೋ ಕೇಸ್ ಮರೆಮಾಚಿಸುವ ಪ್ರಯತ್ನವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಅಲ್ಲದೇ ಸಿ.ಟಿ.ರವಿ ಪ್ರಕರಣ ಮುಚ್ಚಿ ಹಾಕಲು ನನ್ನ ವಿಚಾರ ಪ್ರಸ್ತಾಪಿಸುತ್ತಿದ್ದಾರೆ.
ಸೂಸೈಡ್ ಪ್ರಕರಣ ಸಂಬಂಧ ರೈಲ್ವೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಸತ್ಯ ಹೊರಬರಲಿದೆ. ನಾವು ಸಂಪೂರ್ಣವಾಗಿ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದರು.
ಇನ್ನು ಬಿಜೆಪಿಯವರು ಮಾತನಾಡುವ ಮುನ್ನ ಅವರ ನಾಯಕರನ್ನು ಒಮ್ಮೆ ನೋಡಿಕೊಳ್ಳಲಿ. ಕಲಬುರಗಿಯ ನಿಮ್ಮ ನಾಯಕರು ಏನೇನು ಮಾಡುತ್ತಿದ್ದಾರೆ ಅಂತಾ ತಿಳಿದುಕೊಳ್ಳಿ. ಐಪಿಎಲ್ ಬೆಟ್ಟಿಂಗ್, ಸ್ಯಾಂಡ್ ಮಾಫಿಯಾ, ಪಡಿತರ, ಹಾಲಿನ ಪುಡಿ ಕಳ್ಳತನ ಕೇಸ್ ಯಾರದ್ದು, ಯಾರ ಮೇಲಿವೆ ಎಂದು ಅರಿತುಕೊಳ್ಳಿ ಎಂದು ಪ್ರಿಯಾಂಕ್ ಕುಟುಕಿದರು.