ನವದೆಹಲಿ: ವಾರಗಳ ಸಸ್ಪೆನ್ಸ್ ಗೆ ಅಂತ್ಯ ಹಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಾವು ಪ್ರತಿನಿಧಿಸುವ ಲೋಕಸಭೆ ಸ್ಥಾನವನ್ನು ಸೋಮವಾರ ಅಂತಿಮವಾಗಿ ನಿರ್ಧರಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ, ರಾಹುಲ್ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡ್ ಕ್ಷೇತ್ರದಿಂದ ಗೆದ್ದಿದ್ದರು.ಅವರು 18ನೇ ಲೋಕಸಭೆಯಲ್ಲಿ ಯಾವ ಸ್ಥಾನವನ್ನು ಪ್ರತಿನಿಧಿಸಲು ಆಯ್ಕೆ ಮಾಡುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು.
ಸೋಮವಾರ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಿಯಾಂಕಾ ಗಾಂಧಿ ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ರಾಹುಲ್ ಗಾಂಧಿ ಅವರು ಎರಡು ಲೋಕಸಭಾ ಸ್ಥಾನಗಳಿಂದ ಚುನಾಯಿತರಾಗಿದ್ದಾರೆ. ನಿಯಮಗಳ ಪ್ರಕಾರ, ಅವರು ಒಂದು ಸ್ಥಾನವನ್ನು ತೆರವು ಮಾಡಬೇಕು ಮತ್ತು ಒಂದು ಸ್ಥಾನದಲ್ಲಿ ಮುಂದುವರೆಯಬೇಕು. ಜೂನ್ 18 ಕೊನೆಯ ದಿನಾಂಕವಾಗಿರುವುದರಿಂದ ರಾಹುಲ್ ಅವರ ರಾಯ್ ಬರೇಲಿ ಸ್ಥಾನವನ್ನು ಉಳಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ಅವರು ವಯನಾಡ್ ಜನರಿಂದ ಪ್ರೀತಿಯನ್ನು ಪಡೆದಿದ್ದಾರೆ. ಮತ್ತು ಅವರು ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಸಾಕಷ್ಟು ಚರ್ಚೆಯ ನಂತರ ನಾವು ಪ್ರಿಯಾಂಕಾ ಗಾಂಧಿ ವಯನಾಡ್‌ನಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದು, ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.