ಸಿರುಗುಪ್ಪ: ನಗರದ ತಾಲೂಕು ಕಚೇರಿಯಲ್ಲಿ ಎಸ್.ಟಿ ಮೀಸಲಾತಿಗೆ ಅನ್ಯ ಜಾತಿಗಳ ಸೇರ್ಪಡೆ ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ತಹಶೀಲ್ದಾರ್ ಗೌಸಿಯಾ ಬೇಗಂ ಅವರಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಪಂಗಡ(ಎಸ್.ಟಿ) ಮೀಸಲಾತಿಗೆ ಇತರೆ ಮುಂದುವರೆದ ಜಾತಿಗಳ ಸೇರ್ಪಡೆಯನ್ನು ವಿರೋಧಿಸಿ ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಮ್ಮ ಮೀಸಲಾತಿ ನಮ್ಮ ಹಕ್ಕು, ಸರ್ಕಾರದ ನಡೆಯನ್ನು ಸಹಿಸಲ್ಲ ನ್ಯಾಯಕ್ಕಾಗಿ ಹೋರಾಡುವುದು ನಾಯಕರ ರಕ್ತದಲ್ಲಿದೆ. ಎಂಬ ಘೋಷ ವಾಕ್ಯಗಳು ಮೊಳಗಿದವು. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ನರಸಿಂಹ ನಾಯಕ ಆವರು ಮಾತನಾಡಿ ಅನ್ಯ ವರ್ಗಗಳ ಸೇರ್ಪಡೆ ಮಾಡುವ ಸರ್ಕಾರದ ಹುನ್ನಾರಕ್ಕೆ ನಮ್ಮ ದಿಕ್ಕಾರವಿದೆ. ಮೀಸಲಾತಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲವೆಂದರು.
ನಿವೃತ್ತ ಪ್ರಾಂಶುಪಾಲರಾದ ಬಿ.ಬಸವರಾಜ ಅವರು ಮಾತನಾಡಿ ಸಮುದಾಯಕ್ಕಾಗಿ ವಾಲ್ಮೀಕಿ ಪೀಠದ ಶ್ರೀಗಳು ಅಹೋರಾತ್ರಿ ನಡೆಸಿದ್ದಾರೆ. ಮೀಸಲಾತಿಯಡಿ ಗೆದ್ದು ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಮೌನವಹಿಸಿರುವ ಶಾಸಕರ ನಡೆ ಸರಿಯಲ್ಲ ಎಂದರು.
ಅಲ್ಲಿ ನೆರೆದಿದ್ದ ಯುವಕರು ಅವರೆಲ್ಲಾ ನಾಲಾಯಕ್ ಶಾಸಕರಾಗಿದ್ದಾರೆಂದು ಸಮಾಜದ ಮೇಲೆ ಕಳಕಳಿಯಿದ್ದಲ್ಲಿ ರಾಜಿನಾಮೆ ಕೊಟ್ಟು ಪ್ರತಿಭಟನೆಗೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ಖಜಾಂಚಿ ನರೇಂದ್ರಸಿಂಹ ಅವರು ಮಾತನಾಡಿ ಮೀಸಲಾತಿ ವಿಚಾರಕ್ಕೆ ಬಂದರೆ ಪಕ್ಷಬೇದವನ್ನು ಮರೆತು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಗ್ರಾಮ ಮಟ್ಟದಲ್ಲೂ ನಮ್ಮ ಹೋರಾಟ ಮುಂದುವರೆಯಲಿದೆಂದು ತಿಳಿಸಿದರು.
ಇದೇ ವೇಳೆ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಆನಂದ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಗೌರವಾಧ್ಯಕ್ಷ ಸಣ್ಣ ಯಲ್ಲಪ್ಪ, ಉಪಾಧ್ಯಕ್ಷ ಹೆಚ್.ವಿ.ಈರಣ್ಣ, ಮಾಜಿ ಅಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಗಾದಿಲಿಂಗಪ್ಪ, ವಿದ್ಯಾಭಿವೃದ್ದಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಎಸ್.ಮುದುಕಪ್ಪ, ನಿವೃತ್ತ ಪ್ರಾಂಶುಪಾಲ ಎಮ್.ವೀರೇಶಪ್ಪ, ಇನ್ನಿತರ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಮಾಜದ ಸಹಸ್ರಾರು ಯುವಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




