ತುರುವೇಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಲು ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಹೆಸರಿಗೆ ಮಸಿ ಬಳಿಯಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ಷೇತ್ರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಕರೆ ನೀಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸ್ವಯಂಪ್ರೇರಿತ ಬಂದ್ ಗೆ ಪಟ್ಟಣ ಹಾಗೂ ತಾಲ್ಲೂಕಿನ ಜನತೆ ಸಕಾರಾತ್ಮವಾಗಿ ಸ್ಪಂದಿಸಿದರು.
ಪ್ರತಿಭಟನೆಯಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರೆ, ಪಟ್ಟಣದ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಛೇರಿ ವೃತ್ತದಲ್ಲಿ ಜಮಾಯಿಸಿ ಶ್ರೀಕ್ಷೇತ್ರದ ಪರವಾಗಿ ಜೈಕಾರ ಕೂಗಿದರೆ, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಧಿಕ್ಕಾರ ಕೂಗಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿತು.
ಹಿಂದೂ ಮುಖಂಡ ಚಂದ್ರಶೇಖರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಅಧಿದೇವತೆ ಮಂಜುನಾಥಸ್ವಾಮಿಯು ನಮ್ಮ ಮನೆಯನ್ನು ಬೆಳಗುತ್ತಿರುವ ದೀಪವೆಂದು ಭಾವಿಸಿ ಪೂಜಿಸುತ್ತಿದ್ದೇವೆ. ಧರ್ಮಾಧಿಕಾರಿಗಳ ದೂರದೃಷ್ಟಿಯ ಚಿಂತನೆಯಲ್ಲಿ ಪ್ರಾರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ರಾಜ್ಯದ ಪ್ರತಿ ಹಳ್ಳಿಯಲ್ಲಿನ ಎಲ್ಲಾ ಧರ್ಮ, ಜಾತಿಯ ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗಿ, ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ.
ರಾಜಕಾರಣದಿಂದ ಜಾತಿಗಳ ನಡುವೆ ಕಲಹ ಏರ್ಪಟ್ಟು ಒಡೆದು ಹೋಗಿದ್ದ ಗ್ರಾಮಗಳಿಂದು ಧರ್ಮಾಧಿಕಾರಿಗಳ ಸ್ವಸಹಾಯ ಸಂಘದ ಫಲದಿಂದ ಸೌಹಾರ್ದತೆ, ಸಹಭಾಳ್ವೆಯಿಂದ ಜೀವನ ಸಾಗಿಸುತ್ತಾ ಗ್ರಾಮದ ಅಭಿವೃದ್ದಿಗೆ ಕೈಜೋಡಿಸಿದ್ದಾರೆ. ಸಂಘದಿಂದ ರೈತರಿಗೆ ಕೃಷಿಗೆ ನೆರವು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ಕೆರೆಕಟ್ಟೆ ಅಭಿವೃದ್ದಿ, ದೇವಾಲಯಗಳ ಜೀರ್ಣೋದ್ಧಾರ ನಡೆಯುತ್ತಿದೆ. ಸಂಘದ ಕಾರಣದಿಂದ ಹಿಂದೂ ಮಹಿಳೆಯರು ಒಗ್ಗಟ್ಟಾಗಿದ್ದಾರೆ, ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಧರ್ಮದ ಉಳಿವು, ರಾಜ್ಯದ ಹಳ್ಳಿಗಳು ಅಭಿವೃದ್ದಿಯಾಗುತ್ತಿರುವುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಧರ್ಮಕ್ಷೇತ್ರದ ಮೇಲೆ ಕೆಟ್ಟ ಹೆಸರು ಬರುವಂತೆ ಮಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುವ ಹುನ್ನಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮೀಟರ್ ಬಡ್ಡಿ ವ್ಯವಹಾರದವರಿಗೆ ಕೆಲಸವಿಲ್ಲದಂತಾಗಿದೆ. ಅಮಾಯಕ ಹಿಂದೂಗಳನ್ನು ಸಾಲ ನೀಡುವ ನೆಪದಲ್ಲಿ ಪುಸಲಾಯಿಸಿ ಮತಾಂತರ ಮಾಡುವ ಕ್ರಿಶ್ಚಿಯನ್ ಮಿಷನರಿಗಳ ಕೆಲಸವೂ ನಿಂತುಹೋಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ ಜಿಹಾದಿಗಳ ಆಟವೂ ನಡೆಯುತ್ತಿಲ್ಲ. ಇದಕ್ಕೆಲ್ಲಾ ಕಾರಣ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ. ಈ ಕಾರಣದಿಂದ ಮೀಟರ್ ಬಡ್ಡಿಯವರು, ಕ್ರಿಶ್ಚಿಯನ್ ಮೆಷಿನರಿಗಳು, ಜಿಹಾದಿಗಳೆಲ್ಲಾ ಸೇರಿ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ವಿಕೃತ ಮನಸ್ಸಿನ ವ್ಯಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ದೂರಿದ ಅವರು, ಧರ್ಮಸ್ಥಳ ಕ್ಷೇತ್ರದ ಮೇಲೆ, ಧರ್ಮಾಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕು, ಹಿಂದೂ ದೇವಸ್ಥಾನ, ಹಿಂದೂ ಮಹಿಳೆಯರು ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತುರುವೇಕೆರೆ ತಾಲ್ಲೂಕಿನ ಧರ್ಮಸ್ಥಳ ಭಕ್ತವೃಂದ ಉಪತಹಸೀಲ್ದಾರ್ ಸುಮತಿ, ಶಿರಸ್ತೇದಾರ್ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿತು. ಹಿಂದೂ ಸಮಾಜದ ಮುಖಂಡರಾದ ನವೀನ್ ಬಾಬು, ಮೃತ್ಯುಂಜಯ, ಗಿರೀಶ್, ರೇಣುಕ, ಅಶೋಕ್, ಹೆಡಗೀಹಳ್ಳಿ ವಿಶ್ವನಾಥ್, ಕೃಷ್ಣಮೂರ್ತಿ, ಚಂದ್ರಕೀರ್ತಿ, ನಟರಾಜು, ಗೌರೀಶ್, ರಂಗನಾಥ್, ಬಸವರಾಜು (ಡ್ರೈವಿಂಗ್) ಸೇರಿದಂತೆ ಸಹಸ್ರಾರು ಮಂದಿ ನಾಗರೀಕರು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




