ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬ್ರಷ್ಟಾಚಾರದ ದರ್ಬಾರ್ ನಡೆಯುತ್ತಿದೆ. ಅಧಿಕಾರಿಗಳು, ಗ್ರಾಮಸ್ಥರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಕರ್ತವ್ಯ ಲೋಪ ಎಸಗುತ್ತಿದ್ದಾರೆಂದು ಆರೋಪಿಸಿ ಸಾಲಹಳ್ಳಿ ಗ್ರಾಮಸ್ಥರೆಲ್ಲರೂ ಸೇರಿ ಸೋಮವಾರ ಗ್ರಾಮ ಪಂಚಾಯತಿಯಲ್ಲಿ ದನಕರುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು.

ರೈತರು ದನಗಳ ಶೆಡ್ಡು ನಿರ್ಮಾಣಕ್ಕಾಗಿ ಪಂಚಾಯಿತಿಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿಲ್ಲ. ನಿಯಮದಂತೆ ಗ್ರಾಮದಲ್ಲಿ ನಿಯಮಿತವಾಗಿ ಗ್ರಾಮಸಭೆ ಹಾಗೂ ವಾರ್ಡ ಸಭೆಯನ್ನು ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಸರಿಯಾಗಿ ಪಂಚಾಯತಿಯಿಂದ ಸಿಗುವ ಸರ್ಕಾರಿ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿಲ್ಲ ಮತ್ತು ಕಂಪ್ಯೂಟರ ಉತಾರ ಮಾಡಿ ಕೊಡಲು ಅಧಿಕಾರಿಗಳು ಬೇಕಾ ಬಿಟ್ಟಿಯಾಗಿ ಹಣ ಕೇಳುತ್ತಿದ್ದಾರೆಂದು ಸಾಲಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈಗಲಾದರೂ ರಾಮದುರ್ಗ ತಾಲೂಕ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಕಡೆ ಗಮನ ಹರಿಸಿ ಸಾಲಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತಾರೆ ಅಥವಾ ಇಲ್ಲೊ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ಮಂಜುನಾಥ ಕಲಾದಗಿ




