ರಾಯಚೂರು : ರಾಯಚೂರು ತಾಲೂಕಿನ ಯರಮರಸ್ ಬಳಿಯ ವೈಟಿಪಿಎಸ್ನ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿ ಮಾಡಿಲ್ಲ, ಅನಾವಶ್ಯಕವಾಗಿ ಕೆಲವರನ್ನು ವಜಾ ಮಾಡಿದ್ದನ್ನು ಖಂಡಿಸಿ ಕಾರ್ಮಿಕರು ಕಂಪನಿಯ ಆವರಣದ ಬಳಿ ಪ್ರತಿಭಟನೆ ನಡರಸಿದರು.
ಕಳೆದ ಮೂರು ವರ್ಷಗಳಿಂದ ಸರಿಯಾದ ಸಮಯಕ್ಕೆ ವೇತನ ಸಿಗದೇ, ಬೋನಸ್ ಅನ್ನು ಕಡಿತಗೊಳಿಸಲಾಗಿದೆ. ಅನೇಕರಿಗೆ ಯಾವುದೇ ಮುನ್ಸೂಚನೆ ನೀಡದೆ ಸ್ಥಳೀಯ 4 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿ ಅನ್ಯರಾಜ್ಯದವರನ್ನು ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ವೇತನ ವಿಳಂಬವನ್ನು ಪ್ರಶ್ನಿಸಿದರೆ ಕುಂಟು ನೆಪ, ತಾಂತ್ರಿಕ ಕಾರಣ ನೀಡಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಯಾವುದೇ ಸೌಲಭ್ಯಗಳಿಲ್ಲದೆ ಕೆಲಸದಿಂದ ವಜಾಗೊಳಿಸಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಜೆ.ವಿ.ಎಲ್. ರೆಡ್ಡಿ, ಅಧ್ಯಕ್ಷ ಎ.ವೈ.ಮಲ್ಲಪ್ಪ ಧಣಿ, ಉಪಾಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಆಶಪ್ಪ, ದೇವರಾಜ, ಶಿವಶರಣಯ್ಯ, ಮಂಜುನಾಥ, ಮುನೀರ್ ಪಾಷಾ, ಹನುಮೇಶ, ಅಬ್ದುಲ್ ಕರೀಂ, ಮೈನುದ್ದಿನ್ ಪಾಲ್ಗೊಂಡಿದ್ದರು.
ವರದಿ : ಗಾರಲದಿನ್ನಿ ವೀರನ ಗೌಡ




